ಮುಜಾಫರ್‌ಪುರ(ಬಿಹಾರ): ಅದೆಷ್ಟೇ ಕೋಪ ಇದ್ರೂ ಮನುಷ್ಯನನ್ನು ಬೆಂಕಿ ಹಚ್ಚಿ ಸುಟ್ಟು ಹಾಕುವುದು ಕ್ರೌರ್ಯವೇ ಸರಿ. ಅಂಥಹದ್ದೇ ಭೀಕರ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಪತ್ನಿಯೇ ತನ್ನ ಗಂಡನನ್ನು ಮರಕ್ಕೆ ಕಟ್ಟಿ ಹಾಕಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ್ದಾಳೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಮುಜಾಫರ್‌ಪುರ ಜಿಲ್ಲೆಯ ಸಾಹೇಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ವಸುದೇವ್‌ಪುರ ಸರೈ ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ಯಾಕಾಗಿ ಬೆಂಕಿ ಹಚ್ಚಿದಳು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸೆಲ್ಫಿ ತೆಗೆವ ನೆಪದಲ್ಲಿ ಬೆಂಕಿ: ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವ ನೆಪದಲ್ಲಿ ಪತ್ನಿ ಮೊದಲು ಪತಿಯನ್ನು ಮರಕ್ಕೆ ಕಟ್ಟಿ ಹಾಕಿದ್ದಾಳೆ. ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿ ಜ್ವಾಲೆಯನ್ನು ಕಂಡ ಸುತ್ತಮುತ್ತಲಿನವರು ಓಡಿ ಬಂದು ರಕ್ಷಿಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಸದ್ಯಕ್ಕೆ ಪ್ರಾಣ ಉಳಿದುಕೊಂಡಿದೆ. ಘಟನೆಯ ಬಳಿಕ ಸ್ಥಳೀಯರು ಸಾಹೇಬಗಂಜ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುವಿನ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿಯ ಸಿಟ್ಟಿನ ಕಾರಣವೇನು?: ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಹೇಳಿಕೆ ಪಡೆದಿರುವ ಪೊಲೀಸರು, ತನ್ನ ಹೆಂಡತಿಯೇ ಕೊಲ್ಲಲು ಬಯಸಿದ್ದಳು. ಸೆಲ್ಫಿ ತೆಗೆಯುವ ನಾಟಕವಾಡಿ ತನ್ನನ್ನು ಮರಕ್ಕೆ ಕಟ್ಟಿಹಾಕಿದಳು ಬಳಿಕ ಬೆಂಕಿ ಹಚ್ಚಿದಳು. ಇದರ ಹಿಂದಿನ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲ ಎಂದು ಸಂತ್ರಸ್ತ ಹೇಳಿದ್ದಾನೆ. ಮತ್ತೊಂದೆಡೆ, ಮಹಿಳೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಇದರಿಂದ ಆಕೆ ಪತಿಯನ್ನು ಕೊಲ್ಲಲು ಬಯಸಿದ್ದಳು ಎಂದು ಗಾಯಾಳುವಿನ ಸಂಬಂಧಿಕರು ಆರೋಪಿಸಿದ್ದಾರೆ.
'ಸುಟ್ಟಗಾಯಗಳಿಂದ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಪತಿಯ ಹೇಳಿಕೆ ಮೇರೆಗೆ ಪತ್ನಿಯನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಹಿಂದಿನ ಕಾರಣ ಏನೆಂಬುದನ್ನು ಪತ್ತೆ ಮಾಡಲಾಗುತ್ತಿದೆ' ಎಂದು ಸಾಹೇಬ್‌ಗಂಜ್ ಪೊಲೀಸ್ ಠಾಣಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಪತ್ನಿಯೇ ತನ್ನನ್ನು ಸಜೀವ ದಹನಕ್ಕೆ ಯತ್ನಿಸಿದ್ದಾಳೆಂದು ಪತಿ ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ಮುಂದಿನ ಕ್ರಮದಲ್ಲಿ ತೊಡಗಿದ್ದಾರೆ. ಆರೋಪಿ ಮಹಿಳೆಯನ್ನೂ ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಬಹುಮಹಡಿ ಕಟ್ಟಡಗಳಿಗೆ ಬೆಂಕಿ: ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕಟ್ಟಡದಲ್ಲಿ ಅಗ್ನಿ ಕಾಣಸಿಕೊಂಡಿದೆ. ಬೆಂಕಿಯು ಕ್ಷಣಾರ್ಧದಲ್ಲಿ ಕಟ್ಟಡವನ್ನು ಆವರಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ 6 ವಾಹನಗಳ ಸಮೇತ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.
ಇಲ್ಲಿನ ಆಡಳಿತ ಕಟ್ಟಡವಾದ ಸಾತ್ಪುರ ಭವನದ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಹಠಾತ್ ಬೆಂಕಿ ಬಿದ್ದಿದೆ. ಮೂರನೇ ಮಹಡಿಯಲ್ಲಿ ಹೊತ್ತಿಕೊಂಡ ಬೆಂಕಿಯು ನಾಲ್ಕನೇ ಮಹಡಿಗೂ ಹಬ್ಬಿದೆ. ಇಲ್ಲಿಯೇ ಆರೋಗ್ಯ ಇಲಾಖೆಯ ಕಚೇರಿ ಸಹ ಇದೆ. ಅವಘಡ ಸಂಭವಿಸಿದ ತಕ್ಷಣ ಕಚೇರಿಯಲ್ಲಿದ್ದ ನೌಕರರನ್ನು ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: car accident: ಡಿವೈಡರ್ಗೆ ಗುದ್ದಿದ ಕಾರು, ಮಹಾರಾಷ್ಟ್ರದಲ್ಲಿ ಹಜ್ಗೆ ತೆರಳುತ್ತಿದ್ದ ನಾಲ್ವರ ದಾರುಣ ಸಾವು