ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮದ್ಯ ಸೇವಿಸಲು ಹಣ ಹೊಂದಿಸುವ ಉದ್ದೇಶದಿಂದ ಆರು ತಿಂಗಳ ಮಗುವನ್ನು ಮಾರಾಟ ಮಾಡಿದ ಆರೋಪದ ಮೇಲೆ ಮೂವರನ್ನು ಭಾನುವಾರ ಬಂಧಿಸಲಾಗಿದೆ. ಈ ಬಂಧಿತ ಆರೋಪಿಗಳು ಮಗುವಿನ ಅಪ್ಪ, ಅಮ್ಮ ಹಾಗೂ ಅಜ್ಜನೇ ಆಗಿದ್ದಾರೆ.
ಬಂಧಿತರನ್ನು ಜೈದೇಬ್ ಚೌಧರಿ (ತಂದೆ), ಸತಿ ಚೌಧರಿ (ತಾಯಿ) ಮತ್ತು ಕನೈ ಚೌಧರಿ (ಅಜ್ಜ) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಅಜ್ಜ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂದು ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣದಲ್ಲಿ ಮಕ್ಕಳ ಕಳ್ಳಸಾಗಣೆ ದಂಧೆಯ ಕೈವಾಡದ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ಮಾರಾಟವಾದ ಮಗು ಇನ್ನೂ ಪತ್ತೆಯಾಗಿಲ್ಲ.
ಉತ್ತರ 24 ಪರಗಣ ಜಿಲ್ಲೆಯ ಪಾನಿಹತಿ ಮೂಲದ ಜೈದೇಬ್ ಚೌಧರಿ ಮತ್ತು ಸತಿ ಚೌಧರಿ ದಂಪತಿಯ ಮಗು ಕೆಲ ದಿನಗಳಿಂದ ಕಾಣೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಅಕ್ಕ-ಪಕ್ಕದ ಮನೆಯವರು ಮಗುವಿನ ಬಗ್ಗೆ ವಿಚಾರಿಸಿದಾಗ ಆ ದಂಪತಿ ಸಂಬಂಧಿಕರ ಮನೆಯಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ, ಈ ದಂಪತಿ ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡಿದ್ದಾರೆ. ಅಂತೆಯೇ, ಈ ವಿಷಯವನ್ನು ಸ್ಥಳೀಯ ಕೌನ್ಸಿಲರ್ ಗಮನಕ್ಕೆ ತಂದಿದ್ದಾರೆ. ಈ ಕೌನ್ಸಿಲರ್ ಮಗು ಕಾಣೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 2 ತಿಂಗಳಲ್ಲಿ 7 ಸಲ ನವಜಾತ ಹೆಣ್ಣು ಶಿಶು ಮಾರಾಟ: ಕೊನೆಗೂ ಅಮ್ಮನ ಮಡಿಲು ಸೇರಿದ್ದೊಂದು ರೋಚಕ ಕಥೆ!
ಅದರಂತೆ ಪೊಲೀಸರು ತನಿಖೆ ಕೈಗೊಂಡ ಮದ್ಯಕ್ಕೆ ಹಣ ಹೊಂದಿಸಲು ಆರು ತಿಂಗಳ ಮಗು ಮಾರಾಟ ಮಾಡಿದ ಆಘಾತಕಾರಿ ಮಾಹಿತಿ ಹೊರ ಬಂದಿದೆ. ಆದ್ದರಿಂದ ತಂದೆ, ತಾಯಿ ಹಾಗೂ ಅಜ್ಜ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಜೈದೇಬ್ ಚೌಧರಿ ಮತ್ತು ಸತಿ ಚೌಧರಿ ದಂಪತಿ ದಿನವಿಡೀ ಮದ್ಯದ ಅಮಲಿನಲ್ಲಿ ಇರುತ್ತಾರೆ. ಆಗಾಗ್ಗೆ ಈ ಕುಟುಂಬದಲ್ಲಿ ಗಲಾಟೆ ನಡೆಯುತ್ತಿರುತ್ತದೆ. ಕೆಲವೊಮ್ಮೆ ನೆರೆಹೊರೆಯವರೊಂದಿಗೆ ಸಾಕಷ್ಟು ಜಗಳವಾಡುತ್ತಿದ್ದರು ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆದರೆ, ಮದ್ಯದ ಚಟವು ತಮ್ಮ ಸ್ವಂತ ಮಗುವನ್ನು ಮಾರಾಟ ಮಾಡುವ ಇಂತಹ ಅಸಹ್ಯವಾದ ನಡೆಗೆ ತಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಘಟನೆಯಲ್ಲಿ ಮಗುವನ್ನು ಯಾರಿಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿಯನ್ನು ಬಂಧಿತರಿಂದ ಹೊರತೆಗೆಯುವುದೇ ನಮ್ಮ ಪ್ರಮುಖ ಗುರಿಯಾಗಿದೆ. ಇದರಿಂದ ಹೆಚ್ಚಿನ ತನಿಖೆಯನ್ನು ಕೈಗೊಂಡು ಮಗುವನ್ನು ರಕ್ಷಿಸಲು ಸಾಧ್ಯವಾಗಬಹುದು. ಈಗಾಗಲೇ ಬಂಧಿತ ಮೂವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಎಲ್ಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಕೋರಲಾಗುತ್ತದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕಷ್ಟ ಕಾಲದಲ್ಲಿ ಮಗು ಮಾರಾಟ; ಕಂದನ ನೆನಪು ಕಾಡಿ, ಮರಳಿ ಕೇಳಿದ್ದಕ್ಕೆ ತಾಯಿ ಹತ್ಯೆ!