ಹೈದರಾಬಾದ್ (ತೆಲಂಗಾಣ): ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಗಂಭೀರ ಆರೋಪದ ಮೇಲೆ ತೆಲುಗು ಚಲನಚಿತ್ರ ನಿರ್ಮಾಪಕ ಕೃಷ್ಣ ಪ್ರಸಾದ್ ಚೌಧರಿ (ಎಸ್‌ಕೆಪಿ ಚೌಧರಿ) ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಇವರಿಂದ 80 ಗ್ರಾಂ ಕೊಕೇನ್ ಹಾಗೂ ನಾಲ್ಕು ಮೊಬೈಲ್ ಫೋನ್‌ಗಳು ಹಾಗು ಕಾರು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಪಕ ಚೌಧರಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ನಂಬಲರ್ಹ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. 82.75 ಗ್ರಾಂ ತೂಕದ 90 ಸ್ಯಾಚೆಟ್‌ಗಳು, 2.05 ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು 78.50 ಲಕ್ಷ ರೂ. ವಸ್ತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾ ವಿತರಣೆಯಲ್ಲಿ ನಷ್ಟ: ತೆಲುಗಿನ ಕಬಾಲಿ ಚಿತ್ರದ ನಿರ್ಮಾಪಕ ಕೃಷ್ಣ ಪ್ರಸಾದ್ ಚೌಧರಿ, ಎರಡು ತೆಲುಗು ಮತ್ತು ಒಂದು ತಮಿಳು ಚಿತ್ರಕ್ಕೆ ವಿತರಕರಾಗಿದ್ದರು. ಆದರೆ, ನಿರೀಕ್ಷಿತ ಲಾಭ ಪಡೆಯಲಿಲ್ಲ. ಆ ಬಳಿಕ ಗೋವಾಕ್ಕೆ ತೆರಳಿ ಅಲ್ಲಿ ಕ್ಲಬ್ ಆರಂಭಿಸಿದ್ದರು. ಹೈದರಾಬಾದ್‌ನಿಂದ ಗೋವಾ ಕ್ಲಬ್‌ಗೆ ಬರುತ್ತಿದ್ದ ಸ್ನೇಹಿತರು ಮತ್ತು ಸೆಲೆಬ್ರಿಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಈ ವ್ಯಾಪಾರದಲ್ಲೂ ನಷ್ಟದಿಂದಾಗಿ ಚೌಧರಿ ಏಪ್ರಿಲ್‌ನಲ್ಲಿ ಹೈದರಾಬಾದ್‌ಗೆ ಮರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ವಂಚನೆ: 'ಶಭಾಷ್ ಬಡ್ಡಿ ಮಗನೇ' ನಿರ್ಮಾಪಕ ಪ್ರಕಾಶ್ ಬಂಧನ
ಹೈದರಾಬಾದ್‌ಗೆ ಬರುವಾಗ ನೈಜೀರಿಯಾದ ವ್ಯಕ್ತಿಯಿಂದ 100 ಸ್ಯಾಚೆಟ್‌ಗಳ ಕೊಕೇನ್‌ಗಳನ್ನು ಖರೀದಿಸಿದ್ದರು. ಅದರಲ್ಲಿ 10 ಸ್ಯಾಚೆಟ್‌ಗಳ ಡ್ರಗ್ಸ್ ಅನ್ನು ಸೇವನೆಗೆ ಇಟ್ಟುಕೊಂಡಿದ್ದರು. ಉಳಿದನ್ನು ಸ್ನೇಹಿತರಿಗೆ ಮಾರಾಟ ಮಾಡಲು ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಅವರು ಕೊಕೇನ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸ್ ತಂಡವು ಕೆ.ಪಿ. ಚೌಧರಿ ಅವರನ್ನು ಬಂಧಿಸಿದೆ. ಕೊಕೇನ್ ಮಾರಾಟ ಮಾಡಿರುವ ನೈಜೀರಿಯಾದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಸಿನಿಮಾ ನಿರ್ಮಾಪಕನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ-1985ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೆಲಂಗಾಣದ ಖಮ್ಮಂ ಜಿಲ್ಲೆ ಬೋನಾಕಲ್ ಮೂಲಕದ ಕೆ.ಪಿ. ಚೌಧರಿ ಬಿ.ಟೆಕ್ ಪದವೀಧರರಾಗಿದ್ದು, ಹಲವು ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. 2016ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಇವರು ಹಲವು ಪ್ರಮುಖ ನಟರು ಅಭಿನಯಿಸಿದ ಚಿತ್ರಗಳ ವಿತರಕರಾಗಿದ್ದರು. ಸರ್ದಾರ್ ಗಬ್ಬರ್ಸಿಂಗ್, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆಚೆಟ್ಟು, ಅರ್ಜುನ್ ಸುರವರಂ ಸೇರಿ ಮುಂತಾದ ಚಿತ್ರಗಳಿಗೆ ವಿತರಕರಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ಕೋಟಿ ರೂ. ಮೌಲ್ಯದ ಕೊಕೇನ್ ವಶ : ಲೈಬೀರಿಯನ್ ಮಹಿಳೆ ಬಂಧನ