ಬಹ್ರೈಚ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಹ್ರೈಚ್‌ನ ವಿಶೇಶ್ವರ್‌ಗಂಜ್ ಎಂಬಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳ ಮುಂದೆ ಬೆತ್ತಲೆಯಾಗಿ ಮಲಗಿದ್ದ ಆರೋಪದ ಮೇಲೆ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿರುವುದು ಮುಖ್ಯೋಪಾಧ್ಯಾಯ ದುರ್ಗಾ ಪ್ರಸಾದ್ ಜೈಸ್ವಾಲ್ ಎಂದು ಖಚಿತಪಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಬ್ಲಾಕ್ ಶಿಕ್ಷಣಾಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯ ಆಧಾರದಲ್ಲಿ ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ವೈರಲ್ ವಿಡಿಯೋದ ಸಂಪೂರ್ಣ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೈಸ್ವಾಲ್ ಅವರನ್ನು ಲಕ್ನೋದಿಂದ ಬಹ್ರೈಚ್‌ನ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ನೇಮಕಗೊಂಡ ದಿನದಿಂದಲೂ ಶಿಕ್ಷಕನ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿವೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯರ ಪೋಷಕರು ಮಾತನಾಡಿ, "ಪ್ರಸಾದ್ ಜೈಸ್ವಾಲ್ ಈ ರೀತಿ ಮಾಡಿದ್ದು ಇದೇ ಮೊದಲಲ್ಲ. ವಿದ್ಯಾರ್ಥಿಗಳ ಮುಂದೆ ಆಗಾಗ್ಗೆ ಅಶ್ಲೀಲ ಕೃತ್ಯ ಎಸಗುತ್ತಿದ್ದರು. ತರಗತಿಯಲ್ಲೇ ಬಟ್ಟೆ ಕಳಚಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ದುರ್ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಶಿಕ್ಷಣಾಧಿಕಾರಿ ಅವ್ಯಕ್ತ್ ರಾಮ್ ತಿವಾರಿ ಪ್ರತಿಕ್ರಿಯಿಸಿ, "ದುರ್ಗಾ ಪ್ರಸಾದ್ ಜೈಸ್ವಾಲ್ ವಿರುದ್ಧ ನಾವು ದೂರು ಸ್ವೀಕರಿಸಿದ್ದೇವೆ. ಬ್ಲಾಕ್ ಶಿಕ್ಷಣಾಧಿಕಾರಿ ನಡೆಸಿದ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ. ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಮುಖ್ಯಶಿಕ್ಷಕರ ವಿರುದ್ಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗುವುದು" ಎಂದರು.
"ಇಲ್ಲಿಯವರೆಗೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ. ಎಫ್‌ಐಆರ್ ದಾಖಲಾದ ನಂತರವಷ್ಟೇ ಬಂಧನದ ಸಾಧ್ಯತೆಗಳಿವೆ. ಸದ್ಯ ಅವರು ಅಮಾನತಾಗಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ: ಜಮ್ಮು ಕಾಶ್ಮೀರದ ಶ್ರೀನಗರ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಆರೋಪದ ಮೇಲೆ ಅರೇಬಿಕ್ ಶಿಕ್ಷಕನನ್ನು ಬಂಧಿಸಿದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಸತಾರ್ ಬೇಗ್ ಎಂಬ ಶಿಕ್ಷಕ ಅಮಾನತುಗೊಂಡಿದ್ದ. ಶ್ರೀನಗರದ ಅಪ್‌ಟೌನ್‌ನ ರಾವಲ್‌ಪೋರಾದಲ್ಲಿರುವ ಹೋಲಿ ಫೇಯ್ತ್ ಶಾಲೆಯ ಶಿಕ್ಷಕನಾಗಿದ್ದ ಈತ 4 ಮತ್ತು 5 ನೇ ತರಗತಿಯ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಶ್ರೀನಗರದ ಸದರ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಕಲಂಗಳಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ: 3ನೇ ತರಗತಿ ಬಾಲಕಿ ಮೇಲೆ ಕ್ರೀಡಾ ಶಿಕ್ಷಕನಿಂದ ಅತ್ಯಾಚಾರ!