ಗಡ್ಚಿರೋಲಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಅತ್ಯಂತ ನೀಚ ಹಾಗೂ ಹೀನ ಕೃತ್ಯವೊಂದು ವರದಿಯಾಗಿದೆ. ಹೆರಿಗೆಗೆಂದು ತವರಿಗೆ ಬಂದ ಏಳು ತಿಂಗಳ ಗರ್ಭಿಣಿ ಸಹೋದರಿ ಮೇಲೆ ಆಕೆಯ ಇಬ್ಬರು ಸಹೋದರರು ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ಗಡ್ಚಿರೋಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಂತ್ರಸ್ತೆ ಕೆಲವು ದಿನಗಳ ಹಿಂದೆ ಹೆರಿಗೆಗಾಗಿ ತನ್ನ ಪೋಷಕರ ಮನೆಗೆ ಬಂದಿದ್ದಳು. ಆಗಸ್ಟ್ 10ರಂದು ಮಹಿಳೆಯ ಪೋಷಕರು ಕೃಷಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಆಕೆಯ ಸಹೋದರರು ಮನೆಗೆ ಬಂದಿದ್ದರು. ಈ ಸಮಯದಲ್ಲಿ ಸಹೋದರಿ ಒಬ್ಬಳೇ ಇರುವುದನ್ನು ಕಂಡ ಈ ದುರುಳರು ಆಕೆಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಪೋಷಕರು ಮನೆಗೆ ಹಿಂದಿರುಗಿದ ನಂತರ ಸಂತ್ರಸ್ತೆ ತನ್ನ ಸಹೋದರರು ಎಸಗಿದ ದುಷ್ಕೃತ್ಯದ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ, ಪೋಷಕರು ಕುರ್ಖೇಡಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯವು ಆದೇಶಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಮತ್ತೊಂದೆಡೆ, ಸಂತ್ರಸ್ತೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಈಕೆ ಮೇಲೆ ನಡೆದ ದುಷ್ಕೃತ್ಯದ ನಂತರ ಆರೋಗ್ಯ ಸ್ಥಿತಿ ಹದಗೆಡಲಾರಂಭಿಸಿದೆ. ಆದ್ದರಿಂದ ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಯ ಆರೋಗ್ಯ ಈಗ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಂಧ್ರ: ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಕಳೆದ ವರ್ಷದ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ವಲಸೆ ಕಾರ್ಮಿಕ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಇದೇ ಬುಧವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2022ರ ಮೇ ತಿಂಗಳಲ್ಲಿ ಸಂತ್ರಸ್ತೆ ಹಾಗೂ ಆಕೆಯ ಪತಿ ಮತ್ತು ಮಕ್ಕಳು ಕೂಲಿ ಕೆಲಸಕ್ಕೆಂದು ಕೃಷ್ಣಾ ಜಿಲ್ಲೆಯ ನಾಗಾಯಾಲಂಕಾ ಗ್ರಾಮಕ್ಕೆ ತೆರಳಲೆಂದು ರೈಲು ನಿಲ್ದಾಣಕ್ಕೆ ಬಂದಿದ್ದರು. ಆಗ ರಾತ್ರಿ ಹೊತ್ತು ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದಾಗ ಕಾಮುಕರು ಬಂದು ಈ ಕುಟುಂಬದೊಂದಿಗೆ ಗಲಾಟೆ ಶುರು ಮಾಡಿದ್ದರು. ನಂತರ ಮಹಿಳೆಯನ್ನು ಪಕ್ಕಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಕುರಿತು ಸಂತ್ರಸ್ತ ಮಹಿಳೆಯ ಪತಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಇದನ್ನೂ ಓದಿ: ಬಾಲಕಿಯರ ಮೇಲೆ ಅತ್ಯಾಚಾರ: ಓರ್ವನ ಬಂಧನ.. ಗುಜರಾತ್ನಲ್ಲಿ ಹೃದಯಾಘಾತಕ್ಕೆ ಬಾಲಕಿ ಬಲಿ