ಮಥುರಾ, ಉತ್ತರಪ್ರದೇಶ: ಜಿಲ್ಲೆಯಲ್ಲಿ ಬುಧವಾರ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬುಧವಾರ ಮಹಿಳೆಯೊಬ್ಬರು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ತನ್ನ ಪತಿ ವಿರುದ್ಧ ಗಂಭೀರ ಆರೋಪ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಮದುವೆಯಾದ ಎರಡು ತಿಂಗಳ ನಂತರ ಪತಿ ಪತ್ರ ಬರೆದು ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಎಸ್‌ಎಸ್‌ಪಿ ಭರವಸೆ ನೀಡಿದ್ದಾರೆ.
ಮಥುರಾ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೌಂಖ್ ರಸ್ತೆ ಸುಖದೇವ್ ನಗರದ ನಿವಾಸಿ ಕಬೀರ್ ಎಂಬ ಯುವಕನೊಂದಿಗೆ 2 ವರ್ಷಗಳಿಂದ ಪ್ರೇಮ ಪ್ರಕರಣ ನಡೆಯುತ್ತಿತ್ತು ಎಂದು ಸಂತ್ರಸ್ತೆ ಮಹಿಳೆ ತಿಳಿಸಿದ್ದಾರೆ. ಜೂನ್ 7 ರಂದು ಇಬ್ಬರೂ ತಮ್ಮ ಸ್ವಂತ ಇಚ್ಛೆಯ ಮೇರೆಗೆ ವಿವಾಹವಾಗಿದ್ದೇವೆ. ಬಳಿಕ ತನ್ನ ಪತಿ ಕಬೀರ್ ಆಗ್ರಾದ ಫತೇಪುರ್ ಸಿಕ್ರಿಯಲ್ಲಿ ವಾಸಿಸುತ್ತಿದ್ದ ಅವರ ಚಿಕ್ಕಮ್ಮ ಸೋನಾ ಮನೆಗೆ ಕರೆದೊಯ್ದರು. ಅಲ್ಲಿ ವಾಸಿಸಲು ಪ್ರಾರಂಭಿಸಿದ್ದೇವೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ 21 ರಂದು ಕಬೀರ್ ತನ್ನ ಮಥುರಾದಲ್ಲಿರುವ ತನ್ನ ಮನೆಗೆ ಹೋಗುವುದಾಗಿ ಹೇಳಿದ್ದರು. ನಂತರ ಅವರು ಹಿಂತಿರುಗಲಿಲ್ಲ. ಇದಾದ ಬಳಿಕ ಜುಲೈ 22ರಂದು ನಾನು ನನ್ನ ಅತ್ತೆಯ ಮನೆಗೆ ಹೋಗಿ ಗಂಡನ ಬಗ್ಗೆ ವಿಚಾರಿಸಲು ಆರಂಭಿಸಿದೆ. ಆಗ ನನ್ನ ಗಂಡನ ಕುಟುಂಬಸ್ಥರು ನನ್ನನ್ನು ನಿಂದಿಸಿ, ಥಳಿಸಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.
ಜುಲೈ 31ರಂದು ನನ್ನ ಪತಿ ವಿಚ್ಛೇದನ ನೀಡಿರುವ ಪತ್ರ ಬಂದಿತ್ತು. ಕೂಡಲೇ ನಾನು ಎಸ್‌ಎಸ್‌ಪಿಗೆ ದೂರು ನೀಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ತನಿಖೆ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿದ ತ್ರಿವಳಿ ತಲಾಖ್ ಹೋರಾಟಗಾರ್ತಿ ನಿದಾ ಖಾನ್..
ತಲಾಖ್ ಬಳಿಕ ಮಹಿಳೆಯ ಕೊಲೆಗೆ ಯತ್ನ: ಮುಜಾಫರ್ ನಗರ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ನೀಡಿದ ಬಳಿಕ ವಿವಾಹಿತ ಮಹಿಳೆಗೆ ವಿಷ ಕುಡಿಸಿ ಕೊಲೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೇಡಿಕೆ ಈಡೇರದಿದ್ದಾಗ ಪತ್ನಿಗೆ ಪತಿ ತ್ರಿವಳಿ ತಲಾಖ್ ನೀಡಿ ನಂತರ ಆಕೆಗೆ ವಿಷ ಕುಡಿಸಿದ್ದಾನೆ. ವಿವಾಹಿತ ಮಹಿಳೆಯ ಸ್ಥಿತಿ ಚಿಂತಾಜನಕವಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಬಳಕಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿ ಪತಿ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಜುಲೈ 22ರಂದು ಬೆಳಕಿಗೆ ಬಂದಿತ್ತು.