ಭರತ್ಪುರ (ರಾಜಸ್ಥಾನ): ಜಮೀನು ವಿವಾದದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದಲ್ಲಿ ಬುಧವಾರ ನಡೆದಿದೆ. ನೂರಾರು ಜನರ ಎದುರೇ ಯುವಕನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಘಟನೆಯ ವಿವರ: ಭರತ್ಪುರ ಜಿಲ್ಲೆಯ ಬಯಾನ್ ಪ್ರದೇಶದ ಅಡ್ಡಾ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರ ಮಧ್ಯೆ ಕಿತ್ತಾಟ ನಡೆದಿದೆ. ಘಟನೆಯಲ್ಲಿ ಎರಡೂ ಕರೆಯವರು ಸೇರಿದಂತೆ ಹಲವರು ಜಮಾಯಿಸಿದ್ದರು. ಒಂದು ಪಕ್ಷದವರು ಟ್ರ್ಯಾಕ್ಟರ್ ಸಮೇತ ಜಮೀನಿಗೆ ಬಂದಿದ್ದರು. ಈ ವೇಳೆ ಇನ್ನೊಂದು ಕಡೆಯವರು ತಮಗೂ ಈ ಜಮೀನು ಸೇರಬೇಕು ಎಂದು ತಗಾದೆ ತೆಗೆದಿದ್ದಾರೆ.
ಇಬ್ಬರ ನಡುವೆ ವಾಗ್ಯುದ್ಧದ ಬಳಿಕ ಒಂದು ಕಡೆ ಗುಂಪಿನ ಯುವಕ ಜಮೀನು ಹೂಳಲು ಬಿಡುವುದಿಲ್ಲ ಎಂದು ವಾದಿಸಿ ಅಲ್ಲಿಯೇ ಮಲಗಿದ್ದಾನೆ. ಈ ವೇಳೆ ಕೋಪೋದ್ರಿಕ್ತ ಇನ್ನೊಂದು ಗುಂಪಿನವರು ಆತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದಾರೆ. ಆರು ಬಾರಿ ಹತ್ತಿಸಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರು ಆತನ ರಕ್ಷಣೆಗೆ ಧಾವಿಸಿದರೂ, ಟ್ರ್ಯಾಕ್ಟರ್ ಮೇಲಿದ್ದ ಆಪಾದಿತ ವ್ಯಕ್ತಿ ಪದೇ ಪದೇ ವಾಹನ ಹತ್ತಿಸಿ ಕೊಲೆ ಮಾಡಿದ್ದಾನೆ. ಈ ಭೀಕರ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಘಟನೆಯ ಬಳಿಕ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕೋಪೋದ್ರಿಕ್ತ ಗುಂಪನ್ನು ಅಲ್ಲಿಂದ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಠಿಕಾಣಿ ಹೂಡಿರುವ ಅವರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಸದರ್ ಪೊಲೀಸ್ ಠಾಣಾಧಿಕಾರಿ ಜೈಪ್ರಕಾಶ್ ಮಾತನಾಡಿ, ಯುವಕನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಲಾಗಿದೆ. ಅಡ್ಡಾ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಸದ್ಯ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ. ಪರಿಸ್ಥಿತಿಯನ್ನು ಪೊಲೀಸರು ನಿಭಾಯಿಸುತ್ತಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜನರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದರು.
ನಾಲ್ಕು ದಿನಗಳ ಹಿಂದಷ್ಟೇ ಕೇಸ್ ದಾಖಲು: ಜಮೀನು ಕುರಿತಾಗಿ ಎರಡೂ ಗುಂಪುಗಳ ನಡುವಿನ ಜಗಳ ಬಹಳ ಹಿಂದಿನಿಂದ ನಡೆಯುತ್ತಿತ್ತು. ನಾಲ್ಕು ದಿನಗಳ ಹಿಂದಷ್ಟೇ ಈ ಬಗ್ಗೆ ಪರಸ್ಪರ ಕೇಸ್ ದಾಖಲಿಸಿದ್ದರು. ಪೊಲೀಸರು ವಿಚಾರಣೆ ನಡೆಸುತ್ತಿರುವ ವೇಳೆಯೇ ಈ ದುರ್ಘಟನೆ ನಡೆದಿದೆ. ಜಮೀನಿಗೆ ಬಂದಿರುವ ಎರಡೂ ಕಡೆಯವರು ಕಿತ್ತಾಡಿಕೊಂಡಿದ್ದಾರೆ. ಕುಟುಂಬಸ್ಥರು, ಜನರ ಮುಂದೆಯೇ ಯುವಕನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಲಾಗಿದೆ ಎಂದು ಸಂಪೂರ್ಣ ವಿವರ ನೀಡಿದರು.
ಇದನ್ನೂ ಓದಿ: ದುಬಾರಿ ವಿಚ್ಛೇದನ: ಪತ್ನಿಗೆ 30 ಲಕ್ಷ, ಮಗಳ ಹೆಸರಿಗೆ 70 ಲಕ್ಷ ರೂ.; ಒಟ್ಟು ಕೋಟಿ ರೂ ಜಮೆ ಮಾಡಲು ಒಪ್ಪಿದ ಉದ್ಯಮಿ!