ಮುಜಾಫರ್‌ಪುರ (ಬಿಹಾರ): ಪತಿಯ ಸಾವಿನ ನಂತರ ಜಾರ್ಖಂಡ್‌ನ ತಾಯಿಯೊಬ್ಬಳು ತನ್ನ ಅಪ್ರಾಪ್ತ ಪುತ್ರಿಯನ್ನು ದುಡ್ಡಿಗಾಗಿ ಬಿಹಾರದ ಮುಜಾಫರ್‌ಪುರದಲ್ಲಿ ಮಾರಾಟ ಮಾಡಿದ್ದಾರೆ. ತಾಯಿ ತನ್ನ ಮಗಳನ್ನು ಎರಡೂವರೆ ಲಕ್ಷಕ್ಕೆ ಮಾರಾಟ ಮಾಡಿ, ದೆಹಲಿಯಲ್ಲಿ ಪ್ರಿಯಕರನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. ವಿಷಯ ಬಹಿರಂಗಗೊಂಡ ನಂತರ, ಪೊಲೀಸರು ಹುಡುಗಿಯನ್ನು ವಶಪಡಿಸಿಕೊಂಡರು. ಖರೀದಿದಾರ ಮತ್ತು ಮಧ್ಯವರ್ತಿಯನ್ನು ಬಂಧಿಸಿದರು.
ರಾಂಚಿಯಲ್ಲಿ ವಾಸಿಸುತ್ತಿದ್ದ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕೆಲಸದ ನಿಮಿತ್ತ ಮುಜಾಫರ್‌ಪುರಕ್ಕೆ ತಲುಪಿದ್ದರು ಎಂದು ಹೇಳಲಾಗುತ್ತದೆ. ನಗರದ ಗೋಬರ್ಸಾಹಿ ಪ್ರದೇಶದಲ್ಲಿ ದಂಪತಿ ಮನೆ ಮಾಡಿಕೊಂಡಿದ್ದರು. ಅಲ್ಲಿ ದಂಪತಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸಲಾರಂಭಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಈ ಮಧ್ಯೆ ಮಹಿಳೆಯ ಪತಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಆ ಬಳಿಕ ಸಂಸಾರದ ಹೊರೆ ತಾಯಿಯ ಮೇಲೆ ಬಿದ್ದಿದೆ.
ಪತಿಯ ಮರಣದ ನಂತರ ಪತ್ನಿಯ ಪ್ರೇಮ ಪ್ರಕರಣ: ಸಂಸಾರದ ಹೊರೆ ಹೊರುವುದು ಮಹಿಳೆಗೆ ತುಸು ಕಷ್ಟವಾಗುತ್ತಿತ್ತು. ಇದೇ ವೇಳೆ, ಒಬ್ಬ ಹುಡುಗ ಮಹಿಳೆಯ ಸಂಪರ್ಕಕ್ಕೆ ಬಂದಿದ್ದನು. ಆಕೆಯು ಆತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಮದುವೆಗೆ ಸಿದ್ಧರಾದರು. ಆದರೆ, ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಯುವಕ ನಿರಾಕರಿಸಿದ್ದಾನೆ. ಅದಕ್ಕಾಗಿಯೇ ತಾಯಿ ತನ್ನ ಸಂತೋಷಕ್ಕಾಗಿ ಇಂತಹ ಭಯಂಕರ ಹೆಜ್ಜೆ ಇಟ್ಟಿದ್ದಾಳೆ.
ಪುತ್ರಿಯನ್ನು ಮಾರಾಟ ಮಾಡಿದ ವಿಚಾರ ಬಹಿರಂಗ: ತನ್ನ ನೆರೆಹೊರೆಯಲ್ಲಿ ವಾಸಿಸುವ ದಂಪತಿಯ (ಮಧ್ಯವರ್ತಿ) ಸಹಾಯದಿಂದ ಮಹಿಳೆ ತನ್ನ ಅಪ್ರಾಪ್ತ ಮಗಳನ್ನು ಮಾರಾಟ ಮಾಡಲು ಉದ್ಯಮಿ(35) ಜೊತೆ ಒಪ್ಪಂದ ಮಾಡಿಕೊಂಡಿದ್ದಳೆ. ತಾಯಿ ತನ್ನ ಮಗಳನ್ನು ಮಧ್ಯವರ್ತಿಯೊಬ್ಬನ ಸಹಾಯದಿಂದ ವ್ಯಾಪಾರಸ್ಥನಿಗೆ ಎರಡೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಮಗಳನ್ನು ಮಾರಾಟ ಮಾಡಿದ ನಂತರ ಮಹಿಳೆ ತನ್ನ ಮಗನನ್ನು ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ಬಿಟ್ಟು ತನ್ನ ಪ್ರಿಯಕರ ಪತಿಯೊಂದಿಗೆ ದೆಹಲಿಗೆ ಹೋಗಿದ್ದಳು.
ಎರಡೂವರೆ ಲಕ್ಷಕ್ಕೆ ಪುತ್ರಿಯ ಡೀಲ್ ಮಾಡಿದ ತಾಯಿ: ಮಗನ ಹಾಸ್ಟೆಲ್ ಶುಲ್ಕವನ್ನು ಮಹಿಳೆ ಜಮಾ ಮಾಡದೇ ಇದ್ದಾಗ, ಈ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಹಾಸ್ಟೆಲ್ ನಿರ್ವಾಹಕರು ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇದರ ನಂತರ, ಮಕ್ಕಳ ಅಜ್ಜ ಮತ್ತು ಚಿಕ್ಕಪ್ಪ ರಾಂಚಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರ ಕರೆ ಮೇರೆಗೆ ಬಾಲಕಿಯ ಅಜ್ಜ ಮತ್ತು ಚಿಕ್ಕಪ್ಪ ರಾಂಚಿಯಿಂದ ಮುಜಾಫರ್‌ಪುರಕ್ಕೆ ಆಗಮಿಸಿ ಬಾಲಕಿಯನ್ನು ಹುಡುಕತೊಡಗಿದ್ದಾರೆ.
ಮಧ್ಯವರ್ತಿ ಸೇರಿ ಇಬ್ಬರ ಬಂಧನ- ಎಸ್‌ಎಸ್‌ಪಿ ಮಾಹಿತಿ: ತನಿಖೆಯ ವೇಳೆ, ಪೊಲೀಸ್ ತಂಡವು ಹೆಣ್ಣು ಮಗುವಿನ ಮಾರಾಟ ಮಾಡಲು ನೆರವಾದ ಮಧ್ಯವರ್ತಿ ದಂಪತಿಯನ್ನು ಬಂಧಿಸಿದ್ದಾರೆ. ಬಳಿಕ ಹೆಣ್ಣು ಮಗುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಬಾಲಕಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲು ಪೊಲೀಸರ ತಂಡವು ದಾಳಿ ನಡೆಸುತ್ತಿದೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಜಾಫರ್‌ಪುರ ಎಸ್‌ಎಸ್‌ಪಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
''ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಹೆಣ್ಣು ಮಗುವನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಲಾಗುವುದು. ಎರಡೂವರೆ ಲಕ್ಷಕ್ಕೆ ಹೆಣ್ಣು ಮಗುವಿನ ಡೀಲ್ ಮಾಡಿರುವುದು ಬಯಲಿಗೆ ಬಂದಿದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸಲು ಪೊಲೀಸ್ ತಂಡ ತನಿಖೆಯಲ್ಲಿ ತೊಡಗಿದೆ. ಶೀಘ್ರದಲ್ಲೇ ಸಂಪೂರ್ಣ ಪ್ರಕರಣ ವಿಷಯವನ್ನು ಬಹಿರಂಗಪಡಿಸಲಾಗುವುದು'' ಎಂದು ಎಸ್‌ಎಸ್‌ಪಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚಾರ ಆರೋಪ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲು