ಆಗ್ರಾ: ಉತ್ತರಪ್ರದೇಶದಲ್ಲಿ ಭೀಕರ ಅತ್ಯಾಚಾರ ಮತ್ತು ಕೊಲೆ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮನೆ ಬಾಡಿಗೆಗಿದ್ದ ಯುವಕ, ಮಾಲೀಕನ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ವಿಷಯ ಬಯಲಿಗೆ ಬರದಂತೆ ಮುಚ್ಚಿಹಾಕಲು ಆಕೆಯನ್ನು ಕೊಂದು ಕಬೋರ್ಡ್ನಲ್ಲಿ ಹಾಸಿಗೆಯಲ್ಲಿ ಸುತ್ತಿಟ್ಟ ಆಘಾತಕಾರಿ ಸಂಗತಿ ಬಯಲಾಗಿದೆ. ಆಗ್ರಾ ಜಿಲ್ಲೆಯ ಜಗದೀಶ್‌ಪುರ ಎಂಬಲ್ಲಿ ಈ ಕರುಳುಹಿಂಡುವ ವಿದ್ಯಮಾನ ನಡೆದಿದೆ. ಬಾಡಿಗೆಗೆ ಇದ್ದ ಆರೋಪಿ ಸನ್ನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಜಗದೀಶ್‌ಪುರ ನಿವಾಸಿಗಳಾಗಿದ್ದ ಬಾಲಕಿಯ ತಂದೆ ಬಡಗಿಯಾಗಿದ್ದು, ತಾಯಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಎಂದಿನಂತೆ ತಾಯಿ ತನ್ನಿಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಮನೆಗೆ ಹಿಂತಿರುಗಿ ಬಂದು ನೋಡಿದಾಗ ಮಗಳು ನಾಪತ್ತೆಯಾಗಿದ್ದಳು. ಮನೆಯಲ್ಲಿ ಬಾಡಿಗೆಗೆ ಇದ್ದ ಸನ್ನಿಯನ್ನು ವಿಚಾರಿಸಿದ್ದಾರೆ. ಆತ ತಾನು ನೋಡಿಲ್ಲ ಎಂದು ಹೇಳಿದ್ದಾನೆ. ಮಧ್ಯಾಹ್ನದಿಂದ ಬಾಲಕಿ ಕಾಣೆಯಾಗಿದ್ದಾಳೆ ಎಂದು ಸನ್ನಿ ತಿಳಿಸಿದ್ದಾನೆ.
ಮನೆಯೊಡತಿ ಮಗಳಿಗಾಗಿ ಸಂಜೆವರೆಗೂ ಹುಡುಕಾಡಿದರೂ ಎಲ್ಲೂ ಸಿಕ್ಕಿರಲಿಲ್ಲ. ಪತಿ ಮನೆಗೆ ಬಂದಾಗ, ಮಗಳು ಕಾಣೆಯಾದ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಆರೋಪಿ ಸನ್ನಿ ಕೂಡ ಇವರೊಂದಿಗೆ ಸೇರಿ ಹುಡುಕಾಡಿದ್ದಾನೆ. ಮಗಳ ಸುಳಿವು ಸಿಗದಿದ್ದಾಗ ದಂಪತಿ ತಡರಾತ್ರಿ ಜಗದೀಶ್‌ಪುರ ಠಾಣೆಗೆ ಆಗಮಿಸಿ ದೂರು ನೀಡಿದ್ದರು.
ದಂಪತಿ ನೀಡಿದ ದೂರಿನ ಮೇರೆಗೆ ಜಗದೀಶ್‌ಪುರ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಬಾಲಕಿಯ ಪತ್ತೆಗಾಗಿ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ವೀಕ್ಷಿಸಿದರೂ, ಹುಡುಗಿ ಕಾಣಿಸಲಿಲ್ಲ. ಇದರಿಂದ ಬಾಲಕಿ ಮನೆಯಿಂದ ಹೊರಬಂದಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಬಾಡಿಗೆದಾರ ಸನ್ನಿಯನ್ನು ಶಂಕಿಸಿ, ಆತನನ್ನು ವಿಚಾರಿಸಿದಾಗ ತನಗೆ ಗೊತ್ತಿಲ್ಲ ಎಂದೇ ವಾದಿಸಿದ್ದಾನೆ. ಬಳಿಕ ಬಾಡಿಗೆದಾರ ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಬಾಲಕಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಶವ ಕಬೋರ್ಡ್ನಲ್ಲಿ ಬಚ್ಚಿಟ್ಟಿದ್ದ : ಆರೋಪಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸನ್ನಿ ರೂಮಿನ ಕೊಠಡಿಯನ್ನು ತೆಗೆದು ಪರಿಶೀಲಿಸಿದ್ದಾರೆ. ಬಾಲಕಿಯ ಮೇಲೆ ಆರೋಪಿ ಕ್ರೌರ್ಯ ಮೆರೆದು ಕೊಲೆ ಮಾಡಿ ಮೃತ ದೇಹವನ್ನು ಹಾಸಿಗೆಯಲ್ಲಿ ಸುತ್ತಿ ಕಬೋರ್ಡ್ನಲ್ಲಿ ಮುಚ್ಚಿಟ್ಟಿದ್ದ. ತಲೆಯ ಮೇಲೆ ಗಾಯದ ಗುರುತು ಕಂಡು ಬಂದಿದೆ. ಶವವನ್ನು ವಶಕ್ಕೆ ಪಡೆದ ಪೊಲೀಸರು, ಸ್ಥಳಕ್ಕೆ ಫೋರೆನ್ಸಿಕ್ ತಂಡವನ್ನು ಕರೆಸಿ ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಹೆಚ್ಚಿದ ಅಪರಾಧ: ದೆಹಲಿಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಜನರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿವೆ. ಕಳೆದ ವರ್ಷ ಯುವತಿಯನ್ನು 35 ತುಂಡುಗಳನ್ನಾಗಿ ಕತ್ತರಿಸಿದ್ದ ಅಫ್ತಾಬ್ ಕೇಸ್, ಈ ವರ್ಷದ ಮೊದಲ ದಿನವೇ ಕಾರಿನಡಿ ಸಿಲುಕಿದ್ದ ಯುವತಿಯನ್ನು 13 ಕಿ.ಮೀ ಎಳೆದೊಯ್ದ ಕಾಂಜಾವಾಲಾ ಪ್ರಕರಣ, ವಾರದ ಹಿಂದೆ ಯುವತಿಯ ಮೇಲೆ ಮನ ಬಂದಂತೆ ಚಾಕುವಿನಿಂದ ಚುಚ್ಚಿದ ಘಟನೆಗಳು ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದವು.
ಇದನ್ನೂ ಓದಿ: ಅಕಾಲಿಕ ಜನನದ ಮಕ್ಕಳನ್ನು ಉಳಿಸುವಲ್ಲಿ ಕಾಂಗರೂ ಮದರ್ ಕೇರ್ ಸಹಾಯಕ; ಅಧ್ಯಯನ