ಆಲಪ್ಪುಳ (ಕೇರಳ): ನೆರೆ ರಾಜ್ಯ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಂದೆಯೋರ್ವ ತನ್ನ 6 ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ಜೈಲಿನಲ್ಲಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೇ, ಈ ಆರೋಪಿ ತನ್ನ ತಾಯಿ ಹಾಗೂ ಓರ್ವ ಮಹಿಳಾ ಪೊಲೀಸ್ ಅಧಿಕಾರಿಯ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೇರೆ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಕೋಪ; ಪ್ರಿಯಕರನ ಖಾಸಗಿ ಅಂಗ ಕತ್ತರಿಸಿದ ಪ್ರಿಯತಮೆ!
ಪ್ರಕರಣದ ವಿವರ: ಆಲಪ್ಪುಳ ಜಿಲ್ಲೆಯ ಮಾವೇಲಿಕರದಲ್ಲಿ ಏಪ್ರಿಲ್ 7ರ ಸಂಜೆ ಶ್ರೀಮಹೇಶ್ ಎಂಬಾತ ತನ್ನ ಮಗಳಾದ ನಕ್ಷತ್ರ (6) ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ರಿಮಾಂಡ್‌ಗೆ ಒಪ್ಪಿಸಲಾಗಿದೆ. ಶ್ರೀಮಹೇಶ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆ ಯತ್ನದ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆರೋಪಿಯನ್ನು ದಾಖಲಿಸಲಾಗಿದೆ.
ಸರಣಿ ಕೊಲೆಗಳಿಗೆ ಸಂಚು: ಮತ್ತೊಂದೆಡೆ, ಬಾಲಕಿ ಕೊಲೆ ಪ್ರಕರಣದ ತನಿಖೆ ಹಾಗೂ ಆರೋಪಿ ತಂದೆಯ ವಿಚಾರಣೆಯಲ್ಲಿ ಆಘಾತಕಾರಿ ಮಾಹಿತಿ ಬಯಲಾಗಿದೆ. ಶ್ರೀಮಹೇಶ್ ಸಾಮೂಹಿಕ ಹಾಗೂ ಸರಣಿ ಹತ್ಯೆಗಳಿಗೆ ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 7ರಂದು ಸಂಜೆ ಮನೆಯೊಳಗೆ ಮಗಳನ್ನು ಕೊಲೆ ಮಾಡಿದ ಬಳಿಕ ತನ್ನ ತಾಯಿ ಸುನಂದಾ ಮತ್ತು ತಾನು ಮರುಮದುವೆ ಮಾಡಿಕೊಳ್ಳಲು ಸಿದ್ಧರಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಲು ಯೋಜನೆ ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆನ್‌ಲೈನ್‌ನಲ್ಲಿ ಕೊಡಲಿಗೆ ಆರ್ಡರ್ ಮಾಡಿದ್ದ: ಮಗಳು ನಕ್ಷತ್ರ, ತಾಯಿ ಸುನಂದಾ ಸೇರಿ ಮೂವರನ್ನು ಕೊಲ್ಲುವ ಉದ್ದೇಶವನ್ನು ಆರೋಪಿ ಹೊಂದಿದ್ದ. ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಆಗಲೇ ನಿರ್ಧರಿಸಿದ್ದ. ಈ ಹತ್ಯಾಕಾಂಡ ನಡೆಸಲು ಆನ್‌ಲೈನ್‌ನಲ್ಲಿ ಕೊಡಲಿಗೆ ಆರ್ಡರ್ ಮಾಡಿದ್ದ. ಆದರೆ, ಅದನ್ನು ಸ್ವೀಕರಿಸದಿದ್ದಾಗ ಮತ್ತೊಂದು ಕೊಡಲಿಯನ್ನು ಕಮ್ಮಾರನಿಂದ ಖರೀದಿಸಿದ್ದ. ನಂತರ ಅಲ್ಲಿಂದ ಕೊಲೆಗೆ ಪೂರ್ವ ಯೋಜನೆ ರೂಪಿಸಿಕೊಂಡು ಮನೆಗೆ ಬಂದಿದ್ದ. ಅಂತೆಯೇ, ಈ ಕೊಡಲಿಯಿಂದ ಮಗಳು ನಕ್ಷತ್ರಾಳನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಮೇಲೆ ದಾಳಿ ಮಾಡಿದಾಗ ಶಬ್ಧ ಕೇಳಿ ತಾಯಿ ಸುನಂದಾ ಓಡಿ ಬಂದಿದ್ದಾರೆ. ಆಗ ತಾಯಿಯ ಮೇಲೂ ಶ್ರೀಮಹೇಶ್ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆಕೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಕ್ಷತ್ರಾ ಸಾವಿಗೆ ತಲೆಯ ಹಿಂಭಾಗದಲ್ಲಿ ಆಳವಾದ ಗಾಯವೇ ಕಾರಣವಾಗಿದೆ. ಆರೋಪಿ ಶ್ರೀಮಹೇಶ್‌ನನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಈ ಆಘಾತಕಾರಿ ಮಾಹಿತಿ ಸಿಕ್ಕಿದೆ.
ಪತ್ನಿ ಸಾವಿನಲ್ಲೂ ನಿಗೂಢತೆ: ಹಂತಕ ಶ್ರೀಮಹೇಶ್ ವಿದೇಶದಲ್ಲಿ ನೆಲೆಸಿದ್ದ. ಆದರೆ, ತನ್ನ ತಂದೆ ಶ್ರೀಗಣೇಶ್ ರೈಲು ಅಪಘಾತದಲ್ಲಿ ಮೃತಪಟ್ಟ ನಂತರ ಊರಿಗೆ ಬಂದಿದ್ದ. ಮತ್ತೊಂದೆಡೆ, ಶ್ರೀಮಹೇಶ್ನ ಪತ್ನಿ ವಿದ್ಯಾ ಎರಡು ವರ್ಷಗಳ ಹಿಂದೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ವಿದ್ಯಾ ಸಾವಿನ ಬಗ್ಗೆಯೂ ಅನುಮಾನಗಳು ಎದ್ದಿವೆ. ವಿದ್ಯಾಳದು ಆತ್ಮಹತ್ಯೆಯಲ್ಲ, ಕೊಲೆ. ವಿದ್ಯಾಗೆ ಆರೋಪಿ ಶ್ರೀಮಹೇಶ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: Girlfriend Mother Murder: ಪ್ರೀತಿಗೆ ಅಡ್ಡಿ.. ಉದ್ಯಮಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್ ಪ್ರೇಮಿ