ಜಬಲ್‌ಪುರ (ಮಧ್ಯಪ್ರದೇಶ): ನಾಪತ್ತೆಯಾಗಿದ್ದ ಮಹಾರಾಷ್ಟ್ರದ ನಾಗ್ಪುರ ಮೂಲದ ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಜಬಲ್‌ಪುರ ನಿವಾಸಿಯಾದ ಪತಿ ಅಮಿತ್ ಸಾಹು ಅಲಿಯಾಸ್ ಪಪ್ಪು ಎಂಬಾತನೇ ಈ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹಣಕಾಸು ಹಾಗೂ ವೈಯಕ್ತಿಕ ಕಾರಣಗಳಿಂದ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
34 ವರ್ಷದ ಸನಾ ಖಾನ್ ಪೂರ್ವ ಮಹಾರಾಷ್ಟ್ರ ನಗರ ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಸೆಲ್ ಕಾರ್ಯಕಾರಿ ಸದಸ್ಯೆಯಾಗಿದ್ದರು. ಆಗಸ್ಟ್ 1ರಂದು ಸನಾ ಖಾನ್ ತನ್ನ ಪತಿಯಾದ ಅಮಿತ್ ಸಾಹುನನ್ನು ಭೇಟಿ ಮಾಡಲೆಂದು ಜಬಲ್ಪುರಕ್ಕೆ ಬಂದಿದ್ದರು. ನಾಗ್ಪುರದಿಂದ ಖಾಸಗಿ ಬಸ್‌ನಲ್ಲಿ ಹೊರಟಿದ್ದ ಅವರು ಮರುದಿನ ಜಬಲ್‌ಪುರಕ್ಕೆ ತಲುಪಿದ್ದರು. ಆದರೆ, ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರು ಎಂದು ಸನಾ ಖಾನ್ ತಾಯಿ ಮೆಹ್ರುನಿಶಾ ನಾಗ್ಪುರ ಪೊಲೀಸರಿಗೆ ದೂರು ನೀಡಿದ್ದರು. ನಂತರ ನಾಗ್ಪುರ ಹಾಗೂ ಜಬಲ್‌ಪುರ ಪೊಲೀಸರು ಜಂಟಿಯಾಗಿ ಸನಾ ಖಾನ್ ಪತ್ತೆಗೆ ತನಿಖೆ ಆರಂಭಿಸಿದ್ದರು.
''ನಾಗ್ಪುರ ನಿವಾಸಿ ಸನಾ ಖಾನ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಶುಕ್ರವಾರ ಜಬಲ್ಪುರದ ಗೋರಬಜಾರ್ ಪ್ರದೇಶದಲ್ಲಿ ಅಮಿತ್ ಸಾಹುನನ್ನು ಬಂಧಿಸಲಾಗಿದೆ. ಪೊಲೀಸ್ ವಿಚಾರಣೆಯ ವೇಳೆ ಸನಾ ಖಾನ್ ತನ್ನ ಪತ್ನಿ ಎಂದು ಪೊಲೀಸರಿಗೆ ತಿಳಿಸಿದ್ದು, ಆರ್ಥಿಕ ಮತ್ತು ವೈಯಕ್ತಿಕ ವಿಷಯಗಳಾಗಿ ಕೊಲೆ ಮಾಡುವುದಾಗಿದೆ ಎಂಬುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ'' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಮೌರ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ನಾಪತ್ತೆ!
"ಆರೋಪಿಯು ತನ್ನ ಮನೆಯಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿ ಸನಾ ಖಾನ್ ಅವರನ್ನು ಕೊಲೆ ಮಾಡಿದ್ದಾನೆ. ನಂತರ ಬೆಲ್ಖೇಡ ಪೊಲೀಸ್ ಠಾಣಾ ವ್ಯಾಪ್ತಿಯ ಮೆರೆಗಾಂವ್ ಗ್ರಾಮದ ಬಳಿಯ ಸೇತುವೆಯಿಂದ ಶವವನ್ನು ಹಿರಾನ್ ನದಿಗೆ ಎಸೆದಿದ್ದಾನೆ. ಆರೋಪಿ ಅಮಿತ್ ಸಾಹು ಧಾಬಾ ನಡೆಸುತ್ತಿದ್ದಾನೆ. ಪತ್ನಿಯನ್ನು ಕೊಲೆ ಮಾಡುವ ತನ್ನ ಜೊತೆಯಲ್ಲಿದ್ದ ಇತರ ಸಹಚರರ ಹೆಸರನ್ನೂ ಬಹಿರಂಗಪಡಿಸಿದ್ದಾನೆ. ಸದ್ಯ ನದಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮೃತದೇಹ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ'' ಎಂದು ಕಮಲ್ ಮೌರ್ಯ ಹೇಳಿದ್ದಾರೆ.
ಮತ್ತೊಂದೆಡೆ, ನಾಗ್ಪುರ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ''ನಾಪತ್ತೆಯಾಗಿದ್ದ ಸನಾ ಖಾನ್ ಅವರನ್ನು ಕೊಂದಿರುವುದಾಗಿ ಆರೋಪಿ ಅಮಿತ್ ಸಾಹು ಒಪ್ಪಿಕೊಂಡಿದ್ದಾನೆ. ಜೊತೆಗೆ ಕೊಲೆಯ ಸ್ಥಳವನ್ನು ತನಿಖಾಧಿಕಾರಿಗಳಿಗೆ ತೋರಿಸಿದ್ದಾನೆ. ಶುಕ್ರವಾರ ಸಾಹು ಮತ್ತು ಇತರ ಇಬ್ಬರನ್ನು ಜಬಲ್‌ಪುರದಲ್ಲಿ ಬಂಧಿಸಲಾಗಿದೆ. ನಂತರ ಅವರನ್ನು ನಾಗ್ಪುರಕ್ಕೆ ಕರೆತರಲಾಗಿದೆ. ಇಲ್ಲಿನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗುವುದು'' ಮಾಹಿತಿ ನೀಡಿದ್ದಾರೆ.
''ನಮ್ಮ ಪೊಲೀಸ್ ತಂಡವು ಆಗಸ್ಟ್ 4ರಂದು ಜಬಲ್‌ಪುರಕ್ಕೆ ಭೇಟಿ ನೀಡಿತ್ತು. ಈ ವೇಳೆ ಕೈಗೊಂಡ ತನಿಖೆ ಪ್ರಕಾರ, ಸನಾ ಖಾನ್ ಕೊಲೆಯಾಗುವ ಮುನ್ನ ಜಬಲ್‌ಪುರದ ಮನೆಯಲ್ಲಿದ್ದರು ಎಂದು ಖಚಿತವಾಗಿದೆ. ಸನಾ ಖಾನ್ ತಾಯಿ ಮೆಹ್ರುನಿಶಾ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಅಮಿತ್ ಸಾಹು ವಿರುದ್ಧ ಮಾಂಕಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 364 (ಕೊಲೆಗಾಗಿ ಅಪಹರಣ ಅಥವಾ ಅಪಹರಣ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಕೇಸ್ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ'' ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Sana Khan: ಇನ್ನೂ ಪತ್ತೆಯಾಗದ ಬಿಜೆಪಿ ನಾಯಕಿ ಸನಾ ಖಾನ್; ಪೊಲೀಸರಿಂದ ತನಿಖೆ ಚುರುಕು