ಕ್ಯಾಚಾರ್ (ಅಸ್ಸಾಂ): ಮದರಸಾವೊಂದರ ಹಾಸ್ಟೆಲ್ ಕೊಠಡಿಯಲ್ಲಿ ಶಿರಚ್ಛೇದಿಸಿದ ಸ್ಥಿತಿಯಲ್ಲಿ 12 ವರ್ಷದ ವಿದ್ಯಾರ್ಥಿಯ ಮೃತದೇಹ ಪತ್ತೆಯಾದ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಢೋಲೈ ಗ್ರಾಮದ ದಾರುಸ್ ಸಲಾಮ್ ಹಫೀಜಿಯಾ ಮದರಸಾದ ಹಾಸ್ಟೆಲ್ನಲ್ಲಿ ಶಿಕ್ಷಕರು ಬೆಳಗ್ಗೆ ವಿದ್ಯಾರ್ಥಿಗಳನ್ನು ಎಬ್ಬಿಸಲು ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ಹತ್ಯೆಯಾದ ವಿದ್ಯಾರ್ಥಿ ಕಳೆದ ರಾತ್ರಿ ಊಟ ಮುಗಿಸಿ ನಿದ್ರಿಸಲು ತನ್ನ ಕೊಠಡಿಗೆ ತೆರಳಿದ್ದ. ಬೆಳಗ್ಗೆ ಫಜ್ರ್ ನಮಾಝ್‌ಗಾಗಿ (ಬೆಳಗಿನ ಪ್ರಾರ್ಥನೆ) ವಿದ್ಯಾರ್ಥಿಗಳನ್ನು ಎಬ್ಬಿಸಲು ಶಿಕ್ಷಕರು ಕೋಣೆಗೆ ತೆರಳಿದ್ದಾರೆ. ಆಗ ಶಿರಚ್ಛೇದಗೊಂಡು ರಕ್ತದ ಮಡುವಿನಲ್ಲಿ ವಿದ್ಯಾರ್ಥಿ ಬಿದ್ದಿರುವ ಭೀಕರ ದೃಶ್ಯ ಕಂಡುಬಂದಿದೆ. ಘಟನೆಯಿಂದ ಆಘಾತಗೊಂಡ ಮದರಸಾದವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಎಸ್ಎಂಸಿಹೆಚ್) ರವಾನಿಸಿದ್ದಾರೆ. ಹಾಸ್ಟೆಲ್ನಲ್ಲಿ ವಾಸವಾಗಿದ್ದ ಇತರ 20 ವಿದ್ಯಾರ್ಥಿಗಳು ಹಾಗೂ ಮದರಸಾದ ಮೂವರು ಶಿಕ್ಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯ ಎಸಗಿದವರು ಯಾರು ಮತ್ತು ಇದರ ಹಿಂದಿನ ಕಾರಣವೇನು ಎಂಬುವುದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ: Assam crime: ಅಸ್ಸಾಂನಲ್ಲಿ ಬಾಂಬ್ ತಯಾರಿಸಿ ಮಣಿಪುರಕ್ಕೆ ಸಾಗಾಟ; 200 ಡಿಟೋನೇಟರ್ಸ್, ಜಿಲೆಟಿನ್ ಸ್ಟಿಕ್ ವಶಕ್ಕೆ
ಕಳೆದ ವಾರವಷ್ಟೇ ಕಾಮ್ರೂಪ್ ಜಿಲ್ಲೆಯಲ್ಲಿ ಇಬ್ಬರು ಯುವತಿಯರ ಮೃತದೇಹಗಳು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ತುಳಸಿಬರಿ ಪ್ರದೇಶದಲ್ಲಿ ಆಗಸ್ಟ್ 6ರಂದು ಬೆಳಗ್ಗೆ 19 ವರ್ಷ ಹಾಗೂ 17 ವರ್ಷದ ಯುವತಿಯರ ಶವಗಳನ್ನು ಏಕಕಾಲಕ್ಕೆ ಸ್ಥಳೀಯರು ಪತ್ತೆ ಹಚ್ಚಿದ್ದರು.
ಪ್ರತ್ಯೇಕ ಸ್ಥಳದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಂತಿದ್ದ ಶವಗಳನ್ನು ಗಮನಿಸಿದ್ದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯರು ಅತ್ಯಾಚಾರಕ್ಕೊಳಗಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಮ್ರೂಪ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಚಂದ್ರರಾಯ್, ''ಯುವತಿಯರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ತೀರ್ಮಾನಕ್ಕೆ ಬರಬಹುದು. ಘಟನೆಯ ಕುರಿತು ಎಲ್ಲ ಆಯಾಮಗಳಲ್ಲೂ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ: Assam crime: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆ: ಅತ್ಯಾಚಾರ ಶಂಕೆ