ಮಹಾರಾಷ್ಟ್ರ: ಕಲ್ಲಿದ್ದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಮಹಿಳೆಯೊಬ್ಬರ ಮೇಲೆ 11 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಸತಾರಾ ಜಿಲ್ಲೆಯ ಫಾಲ್ತಾನ್ನಲ್ಲಿ ನಡೆದಿದೆ. ಈ ಸಂಬಂಧ ಕಲ್ಲಿದ್ದಲು ಕಾರ್ಖಾನೆಯ ಮಾಲೀಕ ಮತ್ತು ಆರೋಪಿ ಶಂಕಿತ ಬಾಲು ಶೇಖ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬುಡಕಟ್ಟು ಸಮುದಾಯದ ಮಹಿಳೆಯರು ರಾಷ್ಟ್ರಪತಿ ಭೇಟಿಯಾಗಲಿರುವಾಗಲೇ ಈ ಘಟನೆ ನಡೆದಿದೆ. ಕಲ್ಲಿದ್ದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮೇಲೆ ಹನ್ನೊಂದು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ಮಾತನಾಡಿ, ಕಲ್ಲಿದ್ದಲು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ 11 ಜನರು ಆಕೆಯ ಪತಿಯನ್ನು ಕೊಠಡಿಯಲ್ಲಿ ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ನಂತರ ಆರೋಪಿತರಿಂದ ತಪ್ಪಿಸಿಕೊಳ್ಳಲು ಗಂಡ ಮತ್ತು ಹೆಂಡತಿ ತಮ್ಮ ಐದು ವರ್ಷದ ಮಗಳೊಂದಿಗೆ ಪಂಢರಪುರ ಜಿಲ್ಲೆಯ ರಾಯಗಢದ ತಮ್ಮ ಗ್ರಾಮಕ್ಕೆ ತೆರಳಿ ಘಟನೆಯ ಕುರಿತು ತಮ್ಮ ಸಂಬಂಧಿಕರೊಬ್ಬರಿಗೆ ಮಾಹಿತಿ ನೀಡಿದ್ದಾರೆ ಎಂದರು.
ಸಂತ್ರಸ್ತೆ ಮಹಿಳಾ ಕಾರ್ಮಿಕ ಸಂಘದ ಸಂಪರ್ಕಕ್ಕೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಸಂತ್ರಸ್ತ ಮಹಿಳೆಯ ಮಾವ ಆಕೆಯನ್ನು ರಾಯಗಢ ಜಿಲ್ಲೆಯ ಮಾಂಡ್ವಿ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡಿರುವ ಮಾಂಡ್ವಿ ಪೊಲೀಸರು ಈ ಬಗ್ಗೆ ಸತಾರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಸತಾರಾ ಪೊಲೀಸರು ಸಂತ್ರಸ್ತೆಯನ್ನು ಸತಾರಾಕ್ಕೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಕಾರ್ಖಾನೆಯ ಮಾಲೀಕ ಬಾಲು ಶೇಖ್ ಅವರನ್ನು ತಕ್ಷಣವೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ವರ್ಷದ ಬಾಲಕನ ಬಾಯಿಗೆ ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಗಳು
ಮಗುವಿಗೆ ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತರಿಂದ ಅತ್ಯಾಚಾರ: ಮತ್ತೊಂದೆಡೆ, ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಚಾಕೊಲೇಟ್ ಕೊಡಿಸುವ ಆಸೆ ತೋರಿಸಿ ಮನೆಗೆ ಕರೆದೊಯ್ದು ಮೂವರು ಅಪ್ರಾಪ್ತರೇ ಸೇರಿ ಅತ್ಯಾಚಾರವೆಸಗಿದ ಘಟನೆ ಕಲಬುರಗಿ ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಕಳೆದ ಬುಧವಾರ ಕೆಲಸಕ್ಕೆ ರಜೆ ತೆಗೆದುಕೊಂಡು ಮನೆಯಲ್ಲಿದ್ದ ತನ್ನ ತಾಯಿಯ ಜೊತೆ ಮಗು ಮನೆಯಲ್ಲಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದಾಗ ಮೂವರು ಬಾಲಕರು ಆಕೆಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಹತ್ತು ರೂಪಾಯಿ ಕೈಗಿಟ್ಟು ಪುಸಲಾಯಿಸಿ ಹತ್ತಿರದ ಮನೆಯ ಕೋಣೆಯೊಂದಕ್ಕೆ ಕರೆದೊಯ್ದು ಕೃತ್ಯ ಎಸಗಿದ್ದರು ಎಂದು ತಿಳಿದುಬಂದಿತ್ತು.
ಬಾಲಕಿ ಅಳುತ್ತಾ ಭಯದಲ್ಲಿ ಮನೆಗೆ ಬಂದಾಗ ಅನುಮಾನಗೊಂಡ ತಾಯಿ ವಿಚಾರಿಸಿದ್ದು ಬಾಲಕಿ ಎಲ್ಲವನ್ನೂ ವಿವರಿಸಿದ್ದಳು. ಮಗುವನ್ನು ಪೋಷಕರು ಪಕ್ಕದ ಮನೆಗೆ ಕರೆದುಕೊಂಡು ಹೋದಾಗ ಮನೆ ಕೀಲಿ ಹಾಕಲಾಗಿತ್ತು. ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಬಾಲಕರನ್ನು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದರು.