ಕರೌಲಿ (ರಾಜಸ್ಥಾನ): 19 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ ಆ್ಯಸಿಡ್ ಸುರಿದು ಬಾವಿಗೆ ಎಸೆದಿರುವ ಹೀನ ಕೃತ್ಯ ರಾಜಸ್ಥಾನದ ಕರೌಲಿ ಜಿಲ್ಲೆಯ ಭಿಲಪದ ರಸ್ತೆ ಬಳಿ ನಡೆದಿದೆ. ನಡೌಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಹೊರತೆಗೆದಿದ್ದಾರೆ. ಮೃತ ಯುವತಿ ಬಾಲ್ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಸದ ಕಿರೋಡಿ ಲಾಲ್ ಮೀನಾರಿಂದ ಧರಣಿ: ಘಟನಾ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸಂಸದ ಕಿರೋಡಿ ಲಾಲ್ ಮೀನಾ ಅವರು ಸಂತ್ರಸ್ತ ಕುಟುಂಬ ಸದಸ್ಯರೊಂದಿಗೆ ಧರಣಿ ಕುಳಿತಿದ್ದಾರೆ. ಮೂರ್ನಾಲ್ಕು ಮುಸುಕುಧಾರಿ ದುಷ್ಕರ್ಮಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿ, ಆ್ಯಸಿಡ್ ಸುರಿದು ಬಾವಿಗೆ ಎಸೆದಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕುಟುಂಬದ ಸದಸ್ಯರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಬೇಕು, ನಂತರವೇ ಮೃತದೇಹದ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು. ಹಾಗೆಯೇ ಗೆಹ್ಲೋಟ್ ಸರ್ಕಾರದಲ್ಲಿ ಯಾವುದೇ ಹೆಣ್ಣು ಮಗು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸರು, ಗುರುವಾರ ಬೆಳಗ್ಗೆ ಯುವತಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಹಾಗಾಗಿ ಯುವತಿ ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಕಲಾಗಿತ್ತು. ಎಂದಿನಂತೆ ಅಕ್ಕಪಕ್ಕದ ಗ್ರಾಮಸ್ಥರು ಬಾವಿಗೆ ನೀರು ಸೇದಲು ಹೋದಾಗ ನಡೌಟಿ ಉಪವಿಭಾಗದ ಭಿಲಾಪದ ಎಂಬಲ್ಲಿನ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ನಂತರ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿಯ ತಾಯಿ, ಮಧ್ಯರಾತ್ರಿ ಎದ್ದು ನೋಡಿದಾಗ ಮಗಳು ಕಾಣೆಯಾಗಿರುವುದು ಕಂಡು ಬಂದಿದೆ. ಮೂರ್ನಾಲ್ಕು ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಬಂದು ನನ್ನ ಮಗಳನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಕರೆದೊಯ್ದಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ. ಜೊತೆಗೆ ಮೃತ ಮಗಳಿಗೆ ನಿಶ್ಚಿತಾರ್ಥವಾಗಿತ್ತು ಎಂಬ ವಿಚಾರವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕಾಶ್ಮೀರದಲ್ಲಿ ಕಾರ್ಮಿಕರ ಮೇಲೆ ಉಗ್ರರ ಗುಂಡಿನ ದಾಳಿ: ಮೂವರಿಗೆ ಗಂಭೀರ ಗಾಯ