ಮುಂಬೈ: ವಿಶ್ವಕಪ್ ಕ್ರಿಕೆಟ್ ಟೂರ್ನಿ ಮಹತ್ವದ ಹಂತ ತಲುಪಿದೆ. ಇಂದು (ಬುಧವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೊದಲ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಮುಂಬೈ ಪೊಲೀಸರು ಸೆರೆ ಹಿಡಿದಿದ್ದಾರೆ.
ಕೋಲ್ಕತ್ತಾದಲ್ಲಿ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು, ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಹೈವೋಲ್ಟೇಜ್ ಸೆಮೀಸ್ ಪಂದ್ಯದ ಟಿಕೆಟ್ ಖರೀದಿಸುವಾಗ ಹೆಚ್ಚು ಜಾಗರೂಕರಾಗಿರಿ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದರು. ನ್ಯೂಜಿಲೆಂಡ್-ಭಾರತ ಸೆಮಿಫೈನಲ್ ಪಂದ್ಯದ ವೀಕ್ಷಣೆಗೆ ಆರೋಪಿ, ವಿಐಪಿ ವ್ಯಕ್ತಿಗಳು ಅಥವಾ ವಿಶೇಷ ಆಹ್ವಾನಿತರಿಗೆ ಮೀಸಲಿರುವ ತಲಾ 1.2 ಲಕ್ಷ ರೂಪಾಯಿ ಮೌಲ್ಯದ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ದುಬಾರಿ ಹಣಕ್ಕಾಗಿ ಬ್ಲಾಕ್ ಮಾರ್ಕೆಟಿಂಗ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತ ಸುಳಿವು ಆಧರಿಸಿ ತಕ್ಷಣ ಆರೋಪಿಯನ್ನು ಬಂಧಿಸಿದ್ದು, ಎರಡು ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಈ ಹಿಂದೆ ಈವೆಂಟ್ ಆಯೋಜಕ ಆಕಾಶ್ ಕೊಠಾರಿ ಎಂಬಾತನನ್ನು ವಿಶ್ವಕಪ್ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಈತ ಮೂಲ ಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚು ಹಣಕ್ಕೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ಇತರ ಆರೋಪಿಗಳ ಬಗ್ಗೆ ಕೊಠಾರಿ ಬಾಯ್ಬಿಟ್ಟಿದ್ದು, ಈ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಅಧಿಕಾರಿ ಹೇಳಿದರು.
ನಾವು ಈಗಾಗಲೇ ಕೆಲವು ವ್ಯಕ್ತಿಗಳನ್ನು ಬ್ಲಾಕ್ ಮಾರ್ಕೆಟಿಂಗ್ ಆರೋಪದ ಮೇಲೆ ಬಂಧಿಸಿದ್ದೇವೆ. ಭಾರತ ಮತ್ತು ಶ್ರೀಲಂಕಾ ಪಂದ್ಯದ ಸಂದರ್ಭದಲ್ಲಿ, ನಾವು ಕ್ರೀಡಾಂಗಣದ ಹೊರಗೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಿದ ಕೆಲವರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೇವೆ. ಅಭಿಮಾನಿಗಳು ಹೆಚ್ಚು ಜಾಗರೂಕರಾಗಿರಲು ನಾನು ಮನವಿ ಮಾಡುತ್ತೇನೆ. ಟಿಕೆಟ್ ಖರೀದಿಸಲು ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ ಮತ್ತು ಟಿಕೆಟ್‌ನಲ್ಲಿ ಬರೆದಿರುವ ಮೊತ್ತ ಮಾತ್ರ ಪಾವತಿಸಿ ಎಂದು ಮುಂಬೈ ಪೊಲೀಸ್ ಡಿಸಿಪಿ ಪ್ರವೀಣ್ ಮುಂಡೆ ವಿನಂತಿಸಿದ್ದಾರೆ.
ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಸೆಮೀಸ್ ಫೈಟ್: ನಕಲಿ ಟಿಕೆಟ್ ಬಗ್ಗೆ ಇರಲಿ ಎಚ್ಚರ!