ಕೊಲ್ಹಾಪುರ (ಮಹಾರಾಷ್ಟ್ರ): ಹಳಸಿದ ಆಹಾರ ಸೇವಿಸಿ ಸುಮಾರು 54 ಹಸುಗಳು ಸಾವನ್ನಪ್ಪಿರುವ ದಾರುಣ ಘಟನೆ ಕೊಲ್ಹಾಪುರದಲ್ಲಿ ವರದಿಯಾಗಿದೆ. ಇಲ್ಲಿನ ಕನೇರಿ ಮಠದಲ್ಲಿ ನಡೆಯುತ್ತಿರುವ ಪಂಚ ಮಹಾಭೂತ ಲೋಕೋತ್ಸವದಲ್ಲಿ ದುರಂತ ನಡೆದಿದೆ. 30 ಗೋವುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗುರುವಾರ ರಾತ್ರಿಯಿಂದ ಪಶು ವೈದ್ಯಾಧಿಕಾರಿಗಳ ತಂಡ ಚಿಕಿತ್ಸೆ ನೀಡುತ್ತಿದೆ.
ಫೆಬ್ರವರಿ 20ರಿಂದ ಪಂಚ ಮಹಾಭೂತ ಲೋಕೋತ್ಸವ ನಡೆಯುತ್ತಿದೆ. ನಿತ್ಯ ದೇಶ-ವಿದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಪರಿಸರ, ಪ್ರಾಣಿಗಳ ಮಹತ್ವ ಸಾರುವ ವಸ್ತು ಪ್ರದರ್ಶನ ನಡೆಸಲಾಗಿದ್ದು, ವಿವಿಧ ಆಹಾರ ಮಳಿಗೆಗಳನ್ನೂ ಸ್ಥಾಪಿಸಲಾಗಿದೆ. ಪ್ರಾಣಿಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ. ಮಠದಲ್ಲಿ ಬೃಹತ್ ಗೋ ಶಾಲೆಯಿದೆ. ಇಲ್ಲಿ ಸಾವಿರಾರು ಹಸುಗಳನ್ನು ಸಾಕಲಾಗುತ್ತಿದೆ. ಪ್ರಸ್ತುತ ಲೋಕೋತ್ಸವಕ್ಕೆ ಆಗಮಿಸುವ ಜನರಿಗಾಗಿ ದೊಡ್ಡ ಮಟ್ಟದಲ್ಲಿ ರೊಟ್ಟಿ, ಚಪಾತಿ ಸೇರಿ ಆಹಾರ ವಿವಿಧ ರೀತಿಯ ಆಹಾರ ತಯಾರಿಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆಹಾರ ಉಳಿದಿದ್ದು, ಅದನ್ನು ಹಸುಗಳಿಗೆ ಹಾಕಲಾಗಿತ್ತು ಎನ್ನಲಾಗಿದೆ.
ಗೋವುಗಳ ಸಾವು ಮತ್ತು ಅನಾರೋಗ್ಯದ ವಿಷಯ ತಿಳಿದ ಕೊಲ್ಹಾಪುರದ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಮೃತಪಟ್ಟ ಹಸುಗಳ ನಿಖರ ಸಂಖ್ಯೆಯನ್ನು ಅಧಿಕೃತವಾಗಿ ಹೇಳಲು ಪಶು ವೈದ್ಯಾಧಿಕಾರಿಗಳು ನಿರಾಕರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಲೋಕೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಫಲಿಸಿದ ಹರಕೆ: ಕೆನಡಾದಿಂದ ಮಾದಪ್ಪನ ಬೆಟ್ಟಕ್ಕೆ ಬಂದು ಗೋವು ದಾನ ಕೊಟ್ಟ ಭಕ್ತ