ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ ಭಾರತದಲ್ಲಿ ಒಂದೇ ದಿನದಲ್ಲಿ 628 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,054ಕ್ಕೆ ಏರಿಕೆಯಾಗಿವೆ.
ಒಟ್ಟಾರೆ ಕೋವಿಡ್ನಿಂದ 5,33,334 (5.33 ಲಕ್ಷ) ಸಾವಿನ ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳಲ್ಲಿ ಕೇರಳದಲ್ಲಿ ಒಂದು ಹೊಸ ಸಾವಿನ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಈವರೆಗೆ ಒಟ್ಟು 4,50,09,248 (4.50 ಕೋಟಿ) ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,71,860ಕ್ಕೆ (4.44 ಕೋಟಿ) ಏರಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣವು 98.81 ಪ್ರತಿಶತದಷ್ಟಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, 220.67 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ.
ಕೇರಳದಲ್ಲಿ 128 ಹೊಸ ಕೋವಿಡ್ ಪ್ರಕರಣ: ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 128 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಸೋಮವಾರ, ಈ ಕಾಯಿಲೆಯಿಂದಾಗಿ ಒಂದು ಸಾವಿನ ಪ್ರಕರಣ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ ವರದಿಯಾದ 315 ಸಕ್ರಿಯ ಕರೋನ ವೈರಸ್ ಸೋಂಕುಗಳಲ್ಲಿ 128 ಕೇರಳದಲ್ಲಿ ಕಂಡುಬಂದಿವೆ. ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3,128ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಗುಣಮುಖ, ಡಿಸ್ ಚಾರ್ಜ್ ಆದವರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟಾರೆಯಾಗಿ ಗುಣಮುಖರಾದವರ ಸಂಖ್ಯೆ 68,38,529ಕ್ಕೆ ಏರಿದೆ.
''ಕೇರಳದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹೊರತಾಗಿಯೂ, ಯಾವುದೇ ಆತಂಕಕ್ಕೆ ಕಾರಣವಿಲ್ಲ. ವೈರಲ್ ಸೋಂಕುಗಳನ್ನು ನಿರ್ವಹಿಸಲು ಆಸ್ಪತ್ರೆಗಳು ಸಮರ್ಪಕವಾಗಿ ಸಜ್ಜುಗೊಂಡಿವೆ'' ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.
ಮಹಾರಾಷ್ಟ್ರದಲ್ಲಿ 50 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ಪ್ರಕರಣಗಳಲ್ಲಿ, ಒಂಬತ್ತು JN.1 ಸೋಂಕು ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಹೊಸ ಸೋಂಕುಗಳ ಸಂಖ್ಯೆಯನ್ನು 10 ಕ್ಕೆ ಹೆಚ್ಚಿಸಿದೆ. JN.1 ರೋಗಿಗಳಲ್ಲಿ ಐವರು ಥಾಣೆಯಿಂದ, ಇಬ್ಬರು ಪುಣೆಯಿಂದ ಮತ್ತು ಪುಣೆ ಜಿಲ್ಲೆ, ಅಕೋಲಾ ನಗರ ಮತ್ತು ಸಿಂಧುದುರ್ಗ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಸಚಿವ ಧನಂಜಯ್ ಮುಂಡೆಗೆ ಸೋಂಕು ದೃಢ: ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ್ ಮುಂಡೆ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ತಿಳಿಸಿದ್ದಾರೆ. "ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಲ್ಲಿ ಒಬ್ಬರಾದ ಧನಂಜಯ್ ಮುಂಡೆ ಅವರು ಕೋವಿಡ್-19 ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಮುನ್ನಚ್ಚರಿಕೆ ವಹಿಸಲಾಗಿದೆ. ಕೊರೊನಾ ಹರಡುವಿಕೆಯನ್ನು ಪರಿಶೀಲಿಸಲು ಅಗತ್ಯ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ" ಎಂದು ಅವರು ಮಾಹಿತಿ ನೀಡಿದರು.
ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಸೇರಿದಂತೆ ಆಗ್ನೇಯ ಏಷ್ಯಾದ (SEARO) ದೇಶಗಳು, ಕೋವಿಡ್-19 ಮತ್ತು ಅದರ ಹೊಸ ಉಪ - ವೇರಿಯಂಟ್ JN.1 ಸೇರಿದಂತೆ ಉಸಿರಾಟದ ಕಾಯಿಲೆಗಳ ಉಲ್ಬಣದ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೆ ತರಲು ಒತ್ತಾಯ ಮಾಡಿವೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಕರ್ನಾಟಕ ಮಹಾರಾಷ್ಟ್ರ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಐವರ ಸಾವು