ಚಂಡೀಗಢ (ಪಂಜಾಬ್): ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಮಾರ್ಚ್ 31 ರವರೆಗೆ ಮುಚ್ಚುವುದಾಗಿ ಪಂಜಾಬ್ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಈ ಆದೇಶ ನೀಡಿದ್ದು, ಎಲ್ಲಾ ತರಗತಿಗಳ ಪರೀಕ್ಷೆಗಳನ್ನು ಸಹ ಮುಂದೂಡಲಾಗುವುದು. ಮಾರ್ಚ್ 31ರ ಒಳಗಾಗಿ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಪರಿಸ್ಥಿತಿಗೆ ಅನುಗುಣವಾಗಿ ಪರೀಕ್ಷೆಯ ವಿಧಾನವನ್ನು ನಿರ್ಧರಿಸುತ್ತೇವೆ ಎಂದು ಶಿಕ್ಷಣ ಸಚಿವ ವಿಜಯ್ ಇಂದರ್ ಸಿಂಗ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಎಐಎಡಿಎಂಕೆ ಮುಖಂಡನಿಂದ ಮಹಿಳೆಯರಿಗೆ ಹಣ ಹಂಚಿಕೆ.. ವಿಡಿಯೋ ವೈರಲ್
ಶಾಲಾ ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಮತ್ತು ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಪಂಜಾಬ್ನಲ್ಲಿ ಕಳೆದ 24 ಗಂಟೆಗಳಲ್ಲಿ 2,490 ಹೊಸ ಕೋವಿಡ್ ಕೇಸ್ಗಳು ಹಾಗೂ 38 ಸಾವು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 2,07,888 ಪ್ರಕರಣಗಳು ದಾಖಲಾಗಿದ್ದು, 6,242 ಮಂದಿ ವೈರಸ್ಗೆ ಬಲಿಯಾಗಿದ್ದಾರೆ.