ಜಲಗಾಂವ್(ಮಹಾರಾಷ್ಟ್ರ): ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯ ಮದುವೆಗೆ ಕುಟುಂಬಸ್ಥರು ನಿರಾಕರಣೆ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಾರಾಷ್ಟ್ರದ ಜಲಗಾಂವ್ನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
![Couple of lover suicide in maharashtra](https://etvbharatimages.akamaized.net/etvbharat/prod-images/768-512-12640034-thumbnail-3x2-suiside_0308newsroom_1627998098_672.jpg)
ಪಲಾಡ್ ಗ್ರಾಮದ ಮುಖೇಶ್(22) ಹಾಗೂ ನೇಹಾ(19) ಕಳೆದ ಕೆಲ ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳುವುದಾಗಿ ಕುಟುಂಬಸ್ಥರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಆದರೆ, ಇದಕ್ಕೆ ಕುಟುಂಬದ ಸದಸ್ಯರು ನಿರಾಕರಿಸಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇಬ್ಬರು ಒಂದೇ ಗೋತ್ರಕ್ಕೆ ಸೇರಿದ್ದಾರೆಂಬ ಕಾರಣಕ್ಕಾಗಿ ಕುಟುಂಬಸ್ಥರು ಮದುವೆಗೆ ನಿರಾಕರಣೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ದಿಢೀರ್ 'ಡೀಸೆಲ್" ಪ್ರವಾಹ... ಡಬ್ಬಿ ಹಿಡಿದು ಸಾವಿರಾರು ಲೀಟರ್ ತುಂಬಿಕೊಂಡ ಜನರು!
ಆತ್ಮಹತ್ಯೆಗೆ ಶರಣಾಗಿರುವ ಸ್ಥಳದಲ್ಲಿ ಯಾವುದೇ ರೀತಿಯ ಸೂಸೈಡ್ ನೋಟ್ ಸಿಕ್ಕಿಲ್ಲ. ಆದರೆ, ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಮುಖೇಶ್ ವಾಟ್ಸ್ಆ್ಯಪ್ನಲ್ಲಿ 'ಗುಡ್ಬೈ' ಎಂದು ಬರೆದುಕೊಂಡಿದ್ದರು. ಘಟನೆ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ತದನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಅಂತ್ಯಕ್ರಿಯೆ ನಡೆಸುವುದಕ್ಕೂ ಮೊದಲು ಮದುವೆ
ಆತ್ಮಹತ್ಯೆಗೆ ಶರಣಾಗಿದ್ದ ಮುಖೇಶ್ ಹಾಗೂ ನೇಹಾ ಅಂತ್ಯಕ್ರಿಯೆ ನಡೆಸುವುದಕ್ಕೂ ಮೊದಲು ಇಬ್ಬರ ಮದುವೆ ಮಾಡಲಾಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಮದುವೆ ಮಾಡದ ಕುಟುಂಬಸ್ಥರು ಮೃತದೇಹಗಳಿಗೆ ಮದುವೆ ಮಾಡಿರುವುದು ಮಾತ್ರ ವಿಪರ್ಯಾಸ ಎಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.