ಹೈದರಾಬಾದ್: ಮಹಿಳೆಯರ ಮೇಲೆ ಸ್ವಲ್ಪ ಬಂಗಾರ ಕಂಡರೆ ಸಾಕು ಈ ಕಿಲ್ಲರ್ ದಂಪತಿ ಮಾಯದ ಮಾತುಗಳನ್ನಾಡಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಕೆಲಸ ಕೊಡಿಸುವ ಆಸೆ ತೋರಿಸಿ ಕೊಲೆ ಮಾಡುತ್ತಾರೆ. ಇಂತಹದ್ದೊಂದು ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ: ಎರಡ್ಮೂರು ದಿನಗಳ ಹಿಂದೆ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರು ದುಂಡಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದೇ ದಿನ ರಾತ್ರಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರು. ಬಳಿಕ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಮುಂದುವರಿಸಿದರು.
ಸಿಸಿಟಿವಿ ದೃಶ್ಯ: ಆ ಮಹಿಳೆ ಪ್ರತಿದಿನ ಕೆಲಸದ ನಿಮಿತ್ತ ಲೇಬರ್ ಅಡ್ಡಕ್ಕೆ ತೆರಳುತ್ತಿದ್ದರು ಎಂಬ ವಿಷಯ ತಿಳಿದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ ಮಹಿಳೆ ದಂಪತಿಯೊಂದಿಗೆ ಬೈಕ್ ಮೇಲೆ ತೆರಳುತ್ತಿರುವುದನ್ನು ಪೊಲೀಸರು ಗುರುತಿಸಿದ್ದಾರೆ.
ದಂಪತಿ ಪತ್ತೆ: ಬೈಕ್ ನಂಬರ್ ಮೂಲಕ ವಿಳಾಸ ಪತ್ತೆ ಹಚ್ಚಿದ ಪೊಲೀಸರು ನೇರ ಆ ದಂಪತಿ ಮನೆಗೆ ತೆರಳಿದ್ದಾರೆ. ಈ ವೇಳೆ ದಂಪತಿ ಮನೆ ಖಾಲಿ ಮಾಡುತ್ತಿದ್ದರು. ಆ ದಂಪತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ಕೈಗೊಂಡರು.
ಮಹಿಳೆ ಕೊಲೆ: ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ನಾಪತ್ತೆಯಾಗಿದ್ದ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ದಂಪತಿ ಹೇಳಿದ್ದಾರೆ. ಸಂಗಾರೆಡ್ಡಿ ಜಿಲ್ಲೆಯ ಜಿನ್ನಾರಂ ತಾಲೂಕಿನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ದಂಪತಿ ಬಾಯ್ಬಿಟ್ಟಿದ್ದಾರೆ. ಆಗ ಕೂಡಲೇ ಪೊಲೀಸರು ಘಟನಾಸ್ಥಳವನ್ನು ಪರಿಶೀಲಿಸಿದಾಗ ಮಹಿಳೆಯ ಮೃತ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
ಅಚ್ಚರಿ ಹೇಳಿಕೆ: ದಂಪತಿ ವಿಚಾರಣೆ ವೇಳೆ ಅಚ್ಚರಿ ಸಂಗತಿಗಳು ಬೆಳಕಿಗೆ ಬಂದಿವೆ. ಮೈಮೇಲೆ ಸ್ವಲ್ಪ ಬಂಗಾರ ಕಂಡರೆ ಸಾಕು ಅವರಿಗೆ ಕೂಲಿ ಕೆಲಸ ಕೊಡಿಸುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡುತ್ತೇವೆ. ಬಳಿಕ ಅವರ ಬಳಿಯಿದ್ದ ನಗದು ಮತ್ತು ಬಂಗಾರವನ್ನು ದೋಚಿ ಪರಾರಿಯಾಗುತ್ತಿವೆ. ಇದಾದ ಬಳಿಕ ನಾವು ನಮ್ಮ ಮನೆಯನ್ನು ಬದಲಾಯಿಸುತ್ತೇವೆ ಎಂದು ಪೊಲೀಸರ ವಿಚಾರಣೆ ವೇಳೆ ದಂಪತಿ ಬಾಯ್ಬಿಟ್ಟಿದ್ದಾರೆ.
20ಕ್ಕೂ ಹೆಚ್ಚು ಕೊಲೆ: ಇದೇ ರೀತಿ ಆರೋಪಿ ಗಂಡ 8 ಜನರನ್ನು ಕೊಂದಿದ್ದಾನೆ. ಆರೋಪಿ ಹೆಂಡ್ತಿ 12 ಮಂದಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಮುಂದೂವರಿದ ತನಿಖೆ: ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಎರಡ್ಮೂರು ದಿನಗಳಲ್ಲಿ ಪ್ರಕರಣದ ಇನ್ನಷ್ಟು ಮಾಹಿತಿಯನ್ನು ಮಾಧ್ಯಮದ ಮುಂದೆ ಹಿರಿಯ ಅಧಿಕಾರಿಗಳು ಬಯಲಿಗೆ ತರಲಿದ್ದಾರೆ.