ಸೀತಾಪುರ (ಉತ್ತರ ಪ್ರದೇಶ): ನೆರೆಮನೆಯ ಯುವತಿಯೊಂದಿಗೆ ಮಗ ಓಡಿಹೋದ ಕಾರಣಕ್ಕೆ ಯುವಕನ ತಂದೆ ಹಾಗೂ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಯುವತಿಯ ಕುಟುಂಬಸ್ಥರೇ ಈ ದಂಪತಿಯನ್ನು ಹತ್ಯೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಹರಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೇಪುರ ಗ್ರಾಮದ ನಿವಾಸಿ ಅಬ್ಬಾಸ್ ಅಲಿ (55) ಮತ್ತು ಕೈರುನ್ನಿಸಾ (53) ಎಂಬುವವರೇ ಕೊಲೆಯಾದ ದಂಪತಿ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಮನೆಯ ಮುಂದೆ ಕುಳಿತಿದ್ದಾಗ ದೊಣ್ಣೆ, ಕಬ್ಬಿಣದ ರಾಡ್ ಹಾಗೂ ಅರಿತವಾದ ಆಯುಧಗಳಿಂದ ಥಳಿಸಿ ಕೊಲೆ ಮಾಡಲಾಗಿದೆ. ಈ ಘಟನೆಯ ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಜೋಡಿ ಪ್ರಕರಣದ ನಂತರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ, ಈ ದಂಪತಿಗೆ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳಿದ್ದು, ಇವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ನೆರೆಮನೆಯ ರಾಂಪಾಲ್ ಹಾಗೂ ಆತನ ಕುಟುಂಬಸ್ಥರು ಈ ಕೃತ್ಯದಲ್ಲಿ ಭಾಗಿಯಾದ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಚಕ್ರೇಶ್ ಮಿಶ್ರಾ, ''ಹತ್ಯೆಯಾದ ದಂಪತಿಯ ಮಗ ಹಾಗೂ ಆರೋಪಿತ ಕುಟುಂಬದ ಯುವತಿಯೊಂದಿಗೆ ಓಡಿ ಹೋಗಿರುವುದೇ ಈ ಹತ್ಯೆಗಳಿಗೆ ಕಾರಣ. ನೆರೆಮನೆಯ ರಾಂಪಾಲ್ ಹಾಗೂ ಕುಟುಂಬ ಸದಸ್ಯರು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು, ಮಕ್ಕಳು ಮತ್ತು ಗ್ರಾಮಸ್ಥರ ವಿಚಾರಣೆ ನಡೆಸಲಾಗಿದೆ''ಎಂದು ತಿಳಿಸಿದ್ದಾರೆ.
ಮೂರು ಬಾರಿ ಓಡಿ ಹೋದ ಜೋಡಿ: ಹತ್ಯೆಯಾದ ದಂಪತಿಗೆ ಶೌಕತ್ ಎಂಬ ಮಗನಿದ್ದು, ನೆರೆಮನೆಯ ರಾಂಪಾಲ್ ಪುತ್ರಿ ರೂಬಿ ಪ್ರೀತಿಸುತ್ತಿದ್ದರು. 2020ರಲ್ಲಿ ಮೊದಲ ಬಾರಿಗೆ ಇಬ್ಬರು ಓಡಿ ಹೋಗಿದ್ದರು. ಆದರೆ, ಈ ಸಮಯದಲ್ಲಿ ರೂಬಿ ಅಪ್ರಾಪ್ತಳಾಗಿದ್ದಳು. ಇದರಿಂದ ಈ ಘಟನೆ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಶೌಕತ್ ಜೈಲು ಸೇರಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಬಿಡುಗಡೆಯಾದ ಬಳಿಕ ಇದೇ 2023ರ ಜೂನ್ನಲ್ಲಿ ಶೌಕತ್ ಮತ್ತೆ ರೂಬಿಯೊಂದಿಗೆ ಓಡಿಹೋಗಿದ್ದ. ಹೀಗಾಗಿ ಪೋಷಕರು ಪೊಲೀಸ್ ಠಾಣೆ ಕದ ತಟ್ಟಿದ್ದರು. ಆಗ ಶೌಕತ್ ಬೆಂಬಲಿಸಿ ಹೇಳಿಕೆ ನೀಡಿದ್ದಳು. ಆದರೆ, ಹಿಂದಿನ ಪ್ರಕರಣದಲ್ಲಿ ಮತ್ತೆ ಶೌಕತ್ ಜೈಲು ಸೇರಿದ್ದ. ಇದೀಗ ಇದೇ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದು, ಇಬ್ಬರೂ ಮೂರನೇ ಬಾರಿಗೆ ಓಡಿ ಹೋಗಿದ್ದಾರೆ. ಇದರಿಂದ ಎರಡೂ ಕುಟುಂಬಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಇದನ್ನೂ ಓದಿ: ಬೀದಿ ನಾಯಿ ರಕ್ಷಿಸಿದ ಕುಟುಂಬದ ಮೇಲೆ ದ್ವೇಷ: ಬಾಲಕನ ಥಳಿಸಿ ಕೊಂದ ನೆರೆಮನೆ ವ್ಯಕ್ತಿ