ವಿಜಯವಾಡ (ಆಂಧ್ರಪ್ರದೇಶ): ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಕೃಷ್ಣ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, 40 ವರ್ಷದ ಪ್ರಸಾದ್ ಹಾಗೂ ಆತನ ಪತ್ನಿ 37 ವರ್ಷದ ಭಾರತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಅಂತ್ಯ ಸಂಸ್ಕಾರದ ವೇಳೆ ಏಕಾಏಕಿ ಎದ್ದು ಕುಳಿತ.. ಮುಂದೇನಾಯ್ತು?
ಕಳೆದ 10 ದಿನಗಳಿಂದ ಜ್ವರ, ನೆಗಡಿಯಿಂದ ಬಳಲುತ್ತಿದ್ದ ಇವರನ್ನ ಕೋವಿಡ್ ತಪಾಸಣೆಗೊಳಪಡಿಸಲಾಗಿತ್ತು. ಈ ವೇಳೆ ಸೋಂಕು ಇರುವುದು ದೃಢಗೊಂಡಿದೆ. ತಕ್ಷಣವೇ ಇಬ್ಬರನ್ನ ಮನೆಯಲ್ಲಿ ಐಸೋಲೇಷನ್ ಮಾಡಲಾಗಿತ್ತು. ಈ ವೇಳೆ ದಂಪತಿಗಳು ಖಿನ್ನತೆಗೊಳಗಾಗಿದ್ದಾರೆ. ಜತೆಗೆ ಸೋಂಕು ತಮ್ಮ ಮಕ್ಕಳಿಗೂ ಹರಡಬಹುದು ಎಂದು ಭಯಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ 174ರ ಅಡಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.