ದುಂಡಿಗಲ್ (ತೆಲಂಗಾಣ): ತಮಿಳುನಾಡಿನ ಕೂನೂರಿನಲ್ಲಿ ನಡೆದ ವಾಯುಪಡೆ ಹೆಲಿಕಾಪ್ಟರ್ ಪತನದ ಕುರಿತು ತನಿಖೆ ನಡೆಯುತ್ತಿದೆ. ಇನ್ನೂ ಕೆಲವು ವಾರಗಳ ತನಕ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ ಎಂದು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಶನಿವಾರ ಸ್ಪಷ್ಟಪಡಿಸಿದ್ದಾರೆ.
ತೆಲಂಗಾಣದ ದುಂಡಿಗಲ್ನ ವಾಯುಪಡೆ ಅಕಾಡೆಮಿಯಲ್ಲಿ ನಡೆದ ಪರೇಡ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೂರೂ ಸೇನೆಗಳ ತಂಡವು ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇನ್ನೂ ತನಿಖೆ ಪೂರ್ಣಗೊಳ್ಳಲು ಕೆಲವು ವಾರಗಳು ಬೇಕಿದೆ ಎಂದಿದ್ದಾರೆ.
ನಾವು ಪ್ರತಿ ಸಾಕ್ಷಿಗಳನ್ನು ಪ್ರಶ್ನಿಸುತ್ತೇವೆ. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರು ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸಲಿದ್ದಾರೆ. ಪ್ರತಿಯೊಂದು ಅಂಶವನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಅಧಿಕಾರಿಗಳ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ ವಿ.ಆರ್.ಚೌಧರಿ, ಪರೇಡ್ನಲ್ಲಿ ಅವರ ಗೌರವ ಸೂಚಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ.
ಇನ್ನು ಡಿಸೆಂಬರ್ 8ರಂದು ಭಾರತೀಯ ವಾಯುಸೇನೆ ನಿರ್ವಹಿಸುತ್ತಿದ್ದ Mi-17V-5 ಕಾಪ್ಟರ್ ತಮಿಳುನಾಡಿನ ಕೊಯಮತ್ತೂರು ಮತ್ತು ವೆಲ್ಲಿಂಗ್ಟನ್ ನಡುವೆ ಇರುವ ಕೂನೂರು ಎಂಬಲ್ಲಿ ಅಪಘಾತಕ್ಕೀಡಾಗಿ ಜನರಲ್ ಬಿಪಿನ್ ರಾವತ್ ಸೇರಿ ಹಲವರು ಹುತಾತ್ಮರಾಗಿದ್ದರು.
ಇದನ್ನೂ ಓದಿ: ಗಡಿಯಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ