ಹೈದರಾಬಾದ್ : ಅಪ್ರಾಪ್ತ ಬಾಲಕಿಯೊಂದಿಗೆ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿದರೂ ಸಹ ಅತ್ಯಾಚಾರ ಎಂದು ಪರಿಗಣಿಸಲಾಗುವುದು ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ವರ್ಷದ ಬಾಲಕಿ 26 ವರ್ಷದ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಈ ಸಂಬಂಧ ತನ್ನ ಮಗಳಿಗೆ ಗರ್ಭಪಾತ ಮಾಡಲು ಅವಕಾಶ ನೀಡುವಂತೆ ಮಹಿಳೆ ಮಾಡಿದ ಮನವಿಯನ್ನು ಆಲಿಸಿದ ನ್ಯಾಯಾಲಯವು ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಲಕಿಯ ಕುಟುಂಬಸ್ಥರು ಮಗುವಿಗೆ ಗರ್ಭಪಾತ ಮಾಡುವಂತೆ ನಿಲೋಫರ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಆದರೆ, ವೈದ್ಯರು ಈ ಕ್ರಮವನ್ನು ನಿರಾಕರಿಸಿದ್ದರು. ಪರಿಣಾಮ ಸಂತ್ರಸ್ತೆಯ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. ಸಂತ್ರಸ್ತೆ ತನ್ನ ಗರ್ಭಾವಸ್ಥೆಯ ಕಾರಣದಿಂದಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆ ನ್ಯಾಯಾಲಯವು ಆಕೆಗೆ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡಿದೆ.
ಘಟನೆಯಿಂದ ಗರ್ಭಿಣಿಯಾಗಿರುವ ಅಪ್ರಾಪ್ತ ಬಾಲಕಿಯು ವೈಯಕ್ತಿಕ ಘನತೆಯಿಂದ ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಅವಳ ಮೇಲೆ ದೈಹಿಕ ಮತ್ತು ಮಾನಸಿಕ ಪರಿಣಾಮ ಬೀರುತ್ತದೆ. ಅತ್ಯಾಚಾರದಿಂದ ಉಂಟಾಗುವ ಅನಗತ್ಯ ಗರ್ಭಧಾರಣೆಯನ್ನು ತೊಡೆದು ಹಾಕಬಹುದು. ಹುಡುಗಿ ತನ್ನ ಸಂಬಂಧಿಕರೊಂದಿಗೆ ಸ್ವಇಚ್ಛೆಯಿಂದ ಹೋಗಿದ್ದರೂ ಸಹ, ಇದು ಒಪ್ಪಿಗೆಯ ಲೈಂಗಿಕತೆಯಾಗಿದ್ದರೂ ಸಹ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ಉಲ್ಲೇಖಿಸಿದೆ.
ಇದನ್ನೂ ಓದಿ: ಎಲ್ಲಿವರೆಗೆ ಒಲೆ ಉರಿಯುತ್ತಿರುತ್ತದೆಯೋ ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆ ತಣ್ಣಗಿರುತ್ತೆ; ಸಿಎಂ
ಗರ್ಭಪಾತದ ಪರಿಣಾಮಗಳನ್ನು ಬಾಲಕಿಗೆ ವಿವರಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ ಮತ್ತು ಎರಡೂ ಕಡೆಯವರು ಒಪ್ಪಿದರೆ ವಿಳಂಬವಿಲ್ಲದೆ ಗರ್ಭಪಾತ ಮಾಡಿ ಎಂದು ಹೇಳಿದೆ. ಮದುವೆಯಾಗಿ ಎರಡು ಮಕ್ಕಳಿರುವ ಖಮ್ಮಂನ ಆರೋಪಿ ನವೆಂಬರ್‌ನಲ್ಲಿ ವೈಯಕ್ತಿಕ ಕೆಲಸಕ್ಕಾಗಿ ಈಕೆಯ ಮನೆಗೆ ಬಂದಿದ್ದ ಎಂದು ಬಂಜಾರಾ ಹಿಲ್ಸ್‌ನ ಸಂತ್ರಸ್ತೆ ಆರೋಪಿಸಿದ್ದಾರೆ.
ಬಾಲಕಿಯ ಪೋಷಕರು ಕೆಲಸಕ್ಕೆ ಹೋದಾಗ, ಬಾಲಕಿಯನ್ನು ಬೆದರಿಸಿ ಹೊರಗೆ ಕರೆದೊಯ್ದು ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದನಂತೆ. ಭಯಗೊಂಡ ಆಕೆ ಯಾರೊಂದಿಗೂ ಏನೂ ಹೇಳದೆ ಇದ್ದ ಪರಣಾಮ ಗರ್ಭಿಣಿಯಾಗಿದ್ದಾಳೆ. ಸಂತ್ರಸ್ತೆಯ ಪೋಷಕರು ಬಂಜಾರ ಹಿಲ್ಸ್ ಪೊಲೀಸರಿಗೆ ಘಟನೆ ಸಂಬಂಧ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.