ನವದೆಹಲಿ: ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಹಿಂದೆ ಚುನಾವಣಾ ತಂತ್ರಗಾರ ಸುನೀಲ್ ಕನುಗೋಲು ಪಾತ್ರ ಪ್ರಮುಖವಾಗಿದೆ. ಆರು ತಿಂಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಸುನೀಲ್ ಕನುಗೋಲು ನಡೆಸಿದ ತಂತ್ರಗಾರಿಕೆ ಫಲ ನೀಡಿತ್ತು. ಈ ಹಿನ್ನೆಲೆ ಅವರನ್ನು ತೆಲಂಗಾಣ ಚುನಾವಣೆ ಗೆಲುವಿನ ಕಾರ್ಯದಲ್ಲೂ ಕಾಂಗ್ರೆಸ್ ಭಾಗಿ ಮಾಡಲಾಗಿತ್ತು. ಅದರಂತೆ ಸುನೀಲ್ ಕನುಗೋಲು ಲೆಕ್ಕಾಚಾರ ಇಲ್ಲೂ ಫಲ ನೀಡಿ ಕಾಂಗ್ರೆಸ್ ಜಯಭೇರಿ ಭಾರಿಸಿ ಸರ್ಕಾರ ರಚಿಸಿತ್ತು. ದಕ್ಷಿಣದ ಎರಡು ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಾಯ ಮಾಡಿದ ಸುನೀಲ್ ಕನುಗೋಲು ಇದೀಗ ಲೋಕಸಭಾ ಚುನಾವಣೆ ಗೆಲುವಿಗೆ ಶ್ರಮಿಸಲಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿಸಲು ಮುಂದಾಗಿದ್ದು, ಈ ಜವಾಬ್ದಾರಿ ನೀಡಿದೆ. ಪಕ್ಷದ ಸಾಮಾಜಿಕ ಮಾಧ್ಯಮದ ಪ್ರಚಾರದ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದ ತಂತ್ರಗಾರಿಕೆ: ಮೂಲಗಳ ಪ್ರಕಾರ, ಸುನೀಲ್ ಕನುಗೋಲು, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಈ ಹಿನ್ನೆಲೆ ಇದೀಗ ರಾಷ್ಟ್ರಮಟ್ಟದಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಪ್ರಚಾರ ನೀತಿ ರೂಪಿಸುವಂತೆ ಕೋರಲಾಗಿದೆ. ಈ ಮೂಲಕ ಪಕ್ಷದ ಪ್ರಭಾವ ಹೆಚ್ಚಿಸುವಂತೆ ಕಾರ್ಯ ನಿರ್ವಹಿಸಲಿದ್ದಾರೆ.
ಇದಕ್ಕೆ ಕನುಗೋಲು ಕೂಡ ಹಸಿರು ನಿಶಾನೆ ತೋರಿದ್ದು, ಪಕ್ಷದ ಪ್ರಚಾರ ರೂಪುರೇಷೆ ರೂಪಿಸಲು ಅವರು ವಾರ್ ರೂಂ ರಚಿಸಲಿದ್ದಾರೆ. ಲೋಕಸಭಾ ಚುನಾವಣೆ ಹೊರತಾಗಿ ಅವರಿಗೆ ಹರಿಯಾಣದಲ್ಲೂ ಪಕ್ಷದ ಗೆಲುವಿನ ಜವಾಬ್ದಾರಿ ನೀಡಲಾಗಿದೆ.
ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಲ್ ಮತ್ತು ಸದಸ್ಯರು ಮತ್ತು ಪಕ್ಷದ ಸಂವಹನ ತಂಡದ ಸಭೆಯಲ್ಲಿ ಸುನೀಲ್ ಕನುಗೋಲು ಕೂಡ ಭಾಗಿಯಾಗಿದ್ದರು. ಅವರು ಈಗಾಗಲೇ ಎರಡು ಬಾರಿ ಕಾಂಗ್ರೆಸ್ ವಾರ್ ರೂಂಗೆ ಭೇಟಿ ನೀಡಿದ್ದಾರೆ. ವೇಣುಗೋಪಲ್, ಜೈರಾಂ ರಮೇಶ್, ಪವನ್ ಖೇರ್ ಮತ್ತು ಸುಪ್ರಿಯಾ ಶ್ರೀನಟೆ ಜೊತೆಗೆ ಸಭೆ ನಡೆಸಿದ್ದಾರೆ.
ತೆಲಂಗಾಣ ಗೆಲುವಿನ ಸೂತ್ರಧಾರಿ: ತೆಲಂಗಾಣದಲ್ಲಿ ಚುನಾವಣಾ ಕಾರ್ಯತಂತ್ರ ರೂಪಿಸುವ ಮುನ್ನ ಅವರು ಬಿಆರ್ಎಸ್ ಪಕ್ಷದ ಮುಖ್ಯಸ್ಥ, ತೆಲಂಗಾಣ ಮಾಜಿ ಮುಖ್ಯಮಂತ್ರಿಯೊಂದಿಗೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಿದ್ದರು. ಆದರೆ, ಕೊನೆಗಳಿಗೆಯಲ್ಲಿ ಅವರು ಕಾಂಗ್ರೆಸ್ಗೆ ಸೇರಿದರು. ತಕ್ಷಣಕ್ಕೆ ಅವರನ್ನು ಚುನಾವಣಾ ತಂತ್ರಗಾರಿಕೆ ಸಮಿತಿ ಮುಖ್ಯಸ್ಥರನ್ನಾಗಿ ಮಾಡಲಾಯಿತು. ತೆಲಂಗಾಣದಲ್ಲಿ ಕಳೆದ ಮೇಯಿಂದಲೇ ಚುನಾವಣಾ ಗೆಲುವಿನ ರಣ ತಂತ್ರ ರೂಪಿಸಿದ ಅವರು, ಪಕ್ಷದಲ್ಲಿ ಅನೇಕ ಸಮೀಕ್ಷೆ, ಪ್ರಚಾರ ಆಂದೋಲನ, ಅಭ್ಯರ್ಥಿಗಳ ನಿರ್ಧರಿಸುವಿಕೆ, ಕ್ಷೇತ್ರದ ಸ್ಥಿತಿಗತಿ, ರಾಜಕೀಯ ದಾಳದ ತಂತ್ರಗಾರಿಕೆಗಳಿಗೆ ಪ್ರತಿತಂತ್ರ ಹೆಣೆಯುವ ರೂಪಿಸುವ ಮೂಲಕ ಗೆಲುವಿನ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸಿದರು.
ಕುನಗೋಳು ಅವರು ಈ ಮೊದಲ ಬಿಜೆಪಿಯ ಕಾಂಪೈನ್ನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ 2014ಕ್ಕೆ ಮೊದಲು ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋಲ್ ಅವರ ತಂಡದಲ್ಲಿ ಕೆಲಸ ಮಾಡಿದರು. ಜೊತೆಗೆ 2017ರಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಗೆಲುವಿಗೆ ಕಾರ್ಯತಂತ್ರ ರೂಪಿಸುವ ತಂಡದಲ್ಲಿ ಕಾರ್ಯ ನಿರ್ವಹಿಸಿದರು. ಭಾರತದ ದಕ್ಷಿಣದ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಪ್ರಮುಖ ಜವಾಬ್ದಾರಿ ಹೊತ್ತಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಲೋಕಸಭೆ ಚುನಾವಣೆ: ಕರ್ನಾಟಕ, ತೆಲಂಗಾಣದಲ್ಲಿ 'ಬಲ' ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಕಾರ್ಯತಂತ್ರ