ನವದೆಹಲಿ : ಆಗಸ್ಟ್ 11ರಂದು ಮುಂಗಾರು ಸಂಸತ್ ಅಧಿವೇಶನದಲ್ಲಿ ನಡೆದಿದ್ದ ಹಿಂಸಾತ್ಮಾಕ ಗದ್ದಲದ ತನಿಖೆಗಾಗಿ ರಾಜ್ಯಸಭೆಯ ವಿಚಾರಣಾ ಸಮಿತಿಯ ಭಾಗವಾಗಲು ಕಾಂಗ್ರೆಸ್ ಪಕ್ಷ ನಿರಾಕರಿಸಿದೆ. ಈ ಸಂಬಂಧ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
2021ರ ಆಗಸ್ಟ್ 11ರಂದು ಕಲಾಪದಲ್ಲಿ ನಡೆದಿದ್ದ ಘಟನೆಯ ಬಗ್ಗೆ ತನಿಖೆಗಾಗಿ ಸಮಿತಿ ರಚಿಸುವುದು ಸಂಸದರನ್ನು ಮೌನವಾಗಿಸಲು ಬೆದರಿಸಲು ತಂತ್ರವಾಗಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ದೂರಿದ್ದಾರೆ. ಜನಪ್ರತಿನಿಧಿಗಳ ಧ್ವನಿ ಅಡಗಿಸುವುದಲ್ಲದೆ, ಸರ್ಕಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶ ಇದರಲ್ಲಿದೆ.
ಆದ್ದರಿಂದ, ನಾನು ವಿಚಾರಣಾ ಸಮಿತಿ ರಚಿಸುವುದರ ವಿರುದ್ಧ ಇದ್ದೇನೆ. ಈ ಸಮಿತಿಗೆ ನಾಮನಿರ್ದೇಶನಕ್ಕಾಗಿ ಪಕ್ಷದಿಂದ ಸದಸ್ಯರ ಹೆಸರನ್ನು ಪ್ರಸ್ತಾಪಿಸುವ ಪಕ್ಷದ ಪ್ರಶ್ನೆಯು ಉದ್ಭವಿಸುವುದಿಲ್ಲ" ಎಂದು ಖರ್ಗೆ ಹೇಳಿದ್ದಾರೆ.
ಪ್ರತಿಪಕ್ಷಗಳು ಚರ್ಚೆಗಳಲ್ಲಿ ಭಾಗವಹಿಸಲು ಉತ್ಸುಕರಾಗಿದ್ದವು. ಸಂಸತ್ ಅಧಿವೇಶನ ಸುಗಮವಾಗಿ ನಡೆಯಲು ಸರ್ಕಾರವೇ ಅಡ್ಡಿಯಾಯಿತು ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸರ್ಕಾರವು ವಿರೋಧ ಪಕ್ಷಗಳ ಚರ್ಚೆಯ ಬೇಡಿಕೆಯನ್ನು ಬದಿಗೊತ್ತಿರುವುದು ಮಾತ್ರವಲ್ಲದೆ ನಿರ್ಣಾಯಕ ಮಸೂದೆಗಳನ್ನು ಮಂಡಿಸಿರುವ ಬಗ್ಗೆ ಅರ್ಥಪೂರ್ಣ ಚರ್ಚೆಗಳು ಆಗಿಲ್ಲ. ಇದು ದೇಶದ ಮೇಲೆ ಗಂಭೀರ ಹಾಗೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತದ ಆರ್ಥಿಕ ಸ್ಥಿತಿ, ರೈತರ ಪ್ರತಿಭಟನೆ, ಹಣದುಬ್ಬರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಚೀನಾದ ಉಲ್ಲಂಘನೆ, ಪೆಗಾಸಸ್ ಮತ್ತು ರಾಫೆಲ್ ಹಗರಣಗಳು ಇತರ ಹಲವು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕಲಾಪದಲ್ಲಿ ಚರ್ಚೆಗೆ ನಿಯಮದ ಅಡಿ ಕಾಂಗ್ರೆಸ್ ಹಲವು ಬಾರಿ ನೋಟಿಸ್ ನೀಡಿತ್ತು ಎಂದು ಹೇಳಿದ್ದಾರೆ.