ವಾರಂಗಲ್ (ತೆಲಂಗಾಣ): ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ರಾಜಕೀಯ ಪಕ್ಷಗಳ ನಾಯಕರ ನಡುವೆ ಮಾತಿನ ಸಮರ ತೀವ್ರವಾಗಿದೆ.
ತೆಲಂಗಾಣ ವಿಧಾನಸಭಾ ಚುನಾವಣೆಗೆ 15 ದಿನ ಬಾಕಿ ಇದೆ. ಇಂದು ಪೂರ್ವ ವಾರಂಗಲ್‌ನಲ್ಲಿ ರೋಡ್‌ಶೋ ನಡೆಸಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಬಿಆರ್‌ಎಸ್ ಎರಡೂ ಒಂದೇ. ಒಂದು ಪಕ್ಷ ದೆಹಲಿಯಲ್ಲಿ ಮತ್ತು ಇನ್ನೊಂದು ಪಕ್ಷ ತೆಲಂಗಾಣದಲ್ಲಿ ಇರೋದಷ್ಟೇ ವ್ಯತ್ಯಾಸ. ಎರಡು ಪಕ್ಷಗಳ ನಡುವೆ ಪರಸ್ಪರ ನಂಟಿದ್ದು, ಒಬ್ಬರಿಗೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಲೋಕಸಭೆಯಲ್ಲಿ ಬಿಆರ್‌ಎಸ್‌ನ ಪ್ರತಿನಿಧಿಗಳು ಪ್ರಧಾನಿಯವರ ಒಂದೇ ಸನ್ನೆಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನನ್ನ ಕಣ್ಣುಗಳಿಂದ ನೋಡಿದ್ದೇನೆ. ಜಿಎಸ್‌ಟಿ, ರೈತರ ಕಾನೂನು, ನೋಟು ಅಮಾನ್ಯೀಕರಣದ ಸಮಯದಲ್ಲಿ ಪ್ರಧಾನಿಗೆ ಅಗತ್ಯವಿದ್ದಾಗ ಬಿಆರ್‌ಎಸ್ ಜೊತೆ ಇತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖ ವಿರೋಧ ಪಕ್ಷವಾಗಿ ಪ್ರಾಬಲ್ಯ ಸಾಧಿಸುತ್ತಿರುವುದರಿಂದ ಪ್ರಧಾನಿ ಮೋದಿ ತೆಲಂಗಾಣದಲ್ಲಿ ಕಾಣಿಸುತ್ತಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ: ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಖ್ಯಾತ ನಟಿ ವಿಜಯಶಾಂತಿ
ಬಿಜೆಪಿ ದುರಹಂಕಾರದಿಂದ ತೆಲಂಗಾಣಕ್ಕೆ ಬಂದಿತ್ತು. ಆದರೆ ನಾವು ಬಿಜೆಪಿಯವರನ್ನು 15 ದಿನಗಳಲ್ಲಿ ಸೋಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಧಾನಿ ಮೋದಿಯವರ ವಾಹನದ ಟೈರ್ ಪಂಕ್ಚರ್ ಮಾಡಿದೆ. ಈಗ ತೆಲಂಗಾಣದಲ್ಲಿ ಮೋದಿ ಅವರು ಕಾಣಿಸುತ್ತಿಲ್ಲ. ಆದರೆ, ಹಿಂದಿನಿಂದ ಕೆಸಿಆರ್ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಲಿಸಿ ಬಿಆರ್‌ಎಸ್ ಗೆಲ್ಲಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಲಾಗುತ್ತಿದೆ ಎಂದರು.
ಇದಲ್ಲದೇ, ಎಐಎಂಐಎಂ ವಿರುದ್ಧ ಕೂಡ ಟೀಕೆ ಮಾಡಿದ ರಾಹುಲ್, ತೆಲಂಗಾಣದಲ್ಲಿ ಬಿಜೆಪಿ ಮತ್ತು ಬಿಆರ್‌ಎಸ್ ಹೊರತುಪಡಿಸಿ, ಎಐಎಂಐಎಂ ಎಂಬ ಮೂರನೇ ಪಕ್ಷವೂ ಇದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಎಲ್ಲಿ ಹೋರಾಡುತ್ತಿದೆಯೋ, ಅದು ರಾಜಸ್ಥಾನ, ಅಸ್ಸೋಂ, ಮಹಾರಾಷ್ಟ್ರ ಅಥವಾ ಗುಜರಾತ್ ಆಗಿರಲಿ, ಬಿಜೆಪಿಗೆ ಸಹಾಯ ಮಾಡಲು ಎಐಎಂಐಎಂ ಸಿದ್ಧವಾಗಿರುತ್ತದೆ. ಅಲ್ಲದೇ, ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್ ವಿರುದ್ಧ ಎಐಎಂಐಎಂ ಪಕ್ಷದವರು ಸ್ಪರ್ಧಿಸುತ್ತಾರೆ ಎಂದು ಆರೋಪಿಸಿದರು.
ಮುಂದುವರೆದು ಮಾತನಾಡಿದ ಅವರು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನು ರಾಜ್ಯದಲ್ಲಿ ಅಧಿಕಾರದಿಂದ ಕೆಳಗಿಳಿಸುವುದು ತಮ್ಮ ಪಕ್ಷದ ಮೊದಲ ಗುರಿಯಾಗಿದೆ. 2024ರಲ್ಲಿ ದೆಹಲಿಯಿಂದ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯುವುದು ಇನ್ನೊಂದು ಗುರಿ ಎಂದು ತಿಳಿಸಿದರು.
ನವೆಂಬರ್ 30ರಂದು ಮತದಾನ ನಡೆಯಲಿದ್ದು, ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. 2018ರ ಚುನಾವಣೆಯಲ್ಲಿ, ಬಿಆರ್‌ಎಸ್ 119 ಸ್ಥಾನಗಳ ಪೈಕಿ 88 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಕೇವಲ 19 ಕ್ಷೇತ್ರಗಲ್ಲಿ ಗೆಲುವು ಕಂಡು ಎರಡನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಬಿಆರ್ಎಸ್ಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿದೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಯುವತಿಯರ ಮದುವೆಗೆ ₹ 1 ಲಕ್ಷ, 10 ಗ್ರಾಂ ಚಿನ್ನ, ರೈತರ ಸಾಲ ಮನ್ನಾ