ನವದೆಹಲಿ: ಛತ್ತೀಸ್ಗಢದ ರಾಯಪುರದಲ್ಲಿ ಫೆಬ್ರವರಿ 24ರಿಂದ 26ರವರೆಗೆ ಕಾಂಗ್ರೆಸ್ ಅಧಿವೇಶನ ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ನಡೆಯುವ ಕಾಂಗ್ರೆಸ್ ಸ್ಟೀರಿಂಗ್ ಸಮಿತಿ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಧಿವೇಶನದ ಮೊದಲ ದಿನವೇ ಈ ಸಭೆ ಕರೆಯಲಾಗಿದೆ. ಪಕ್ಷದಲ್ಲಿ ಮಹತ್ವದ ನಿರ್ಣಯಕಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಗೆ ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಫೆಬ್ರವರಿ 24ರಂದು ಸ್ಟೀರಿಂಗ್ ಸಮಿತಿ ಸಭೆ ನಡೆಸಲಿದ್ದಾರೆ. ಸದ್ಯ ಸಿಡಬ್ಲ್ಯುಸಿ ರಚಿಸಬೇಕಾಗಿದೆ. ಆದರೆ, ಇದು ಚುನಾವಣೆಯ ಮೂಲಕ ಪುನರ್ ರಚಿಸಲಾಗುವುದೋ ಅಥವಾ ನಾಮನಿರ್ದೇಶನ ಪ್ರಕ್ರಿಯೆ ನಡೆಯಲಿದೆಯೋ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಸಿಡಬ್ಲ್ಯೂಸಿ ಚುನಾವಣೆ ಭರವಸೆ ನೀಡಿದ್ದ ಖರ್ಗೆ: ಕಾಂಗ್ರೆಸ್ ಪಕ್ಷದೊಳಗೆ ಸಿಡಬ್ಲ್ಯೂಸಿ ಮಹತ್ವದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. 1998ರಲ್ಲಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಾಗಿನಿಂದ ಸದಸ್ಯರನ್ನು ನಾಮನಿರ್ದೇಶನ ಮಾಡುವ ಮೂಲಕ ಈ ಸಿಡಬ್ಲ್ಯುಸಿ ರಚಿಸಿಕೊಂಡು ಬರಲಾಗಿದೆ. ಇದರಿಂದ ಕಳೆದ ಎರಡು ದಶಕಗಳಲ್ಲಿ ಉನ್ನತ ಮಂಡಳಿಗೆ ಸದಸ್ಯರು ಚುನಾಯಿತರಾಗಿಲ್ಲ. ಆದರೆ, ಕಳೆದ ವರ್ಷ ಪಕ್ಷದ ಅಧ್ಯಕ್ಷರ ಚುನಾವಣೆಯ ಪ್ರಚಾರದ ವೇಳೆ ಖರ್ಗೆ ಸಿಡಬ್ಲ್ಯೂಸಿ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದರು.
ಅಕ್ಟೋಬರ್ 26ರಂದು ಕಾಂಗ್ರೆಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಖರ್ಗೆ ಸಿಡಬ್ಲ್ಯೂಸಿ ವಿಸರ್ಜಿಸಿದ್ದರು. ಇದರ ಬದಲಿಗೆ ಪಕ್ಷದ ದಿನನಿತ್ಯದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಸ್ಟೀರಿಂಗ್ ಸಮಿತಿ ರಚಿಸಿದ್ದರು. ಈ ಸ್ಟೀರಿಂಗ್ ಸಮಿತಿಯಲ್ಲಿ ಸಿಡಬ್ಲ್ಯೂಸಿ ಸದಸ್ಯರೇ ಹೆಚ್ಚಾಗಿ ಸೇರಿಸಿದ್ದರು. ಅಂದಿನಿಂದ ಕಾಂಗ್ರೆಸ್ ನೂತಕ ಅಧ್ಯಕ್ಷ ಖರ್ಗೆ, ಮಹತ್ವದ ಸಿಡಬ್ಲ್ಯೂಸಿಗೆ ಚುನಾವಣೆ ನಡೆಸುತ್ತಾರೋ ಅಥವಾ ಇಲ್ಲವೇ ಎಂಬ ಚರ್ಚೆಗಳು ಆರಂಭವಾಗಿದ್ದವು.
ಸಿಡಬ್ಲ್ಯೂಸಿ ಚುನಾವಣೆಗೆ ನಡೆಸುವುದು ಸಕಾರಾತ್ಮಕ ಸಂಕೇತವನ್ನು ರವಾನಿಸುತ್ತದೆ. ಜೊತೆಗೆ ನಾವು ಪಕ್ಷದೊಳಗೆ ಪ್ರಬಲವಾದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಹೊಂದಿದ್ದೇವೆ ಎಂಬುದನ್ನು ಇದು ನಿರೂಪಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಜನಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ, ಸಿಡಬ್ಲ್ಯೂಸಿ ಚುನಾವಣೆಯು 2024ರ ಲೋಕಸಭೆ ಚುನಾವಣೆಗೆ ಮುನ್ನ ಪಕ್ಷ ಸಂಘಟನೆ ಮತ್ತು ಪುನಶ್ಚೇತನಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಪಕ್ಷದ ಮತ್ತೊಬ್ಬ ಪ್ರಮುಖರು ಹೇಳಿದ್ದಾರೆ.
ಶೇ.50ರಷ್ಟು ಸದಸ್ಯರ ನಾಮನಿರ್ದೇಶನದ ಅಧಿಕಾರ: ಇದೇ ವೇಳೆ 2022ರ ಮೇನಲ್ಲಿ ಉದಯಪುರದಲ್ಲಿ ನಡೆದ ಚಿಂತನ್ ಶಿಬಿರದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದೊಂದಾಗಿ ಜಾರಿಗೆ ತರಲು ಖರ್ಗೆ ಪ್ರಯತ್ನಿಸುತ್ತಿದ್ದಾರೆ. ಶೇ.50ರಷ್ಟು ಪದಾಧಿಕಾರಿಗಳ ಹುದ್ದೆಗಳನ್ನು 50 ವರ್ಷದೊಳಗಿನವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ. ಸಿಡಬ್ಲ್ಯೂಸಿಯು ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ 24 ಜನ ಸದಸ್ಯರನ್ನು ಹೊಂದಿದೆ. ಅಧ್ಯಕ್ಷರು ಅರ್ಧದಷ್ಟು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿದ್ದು, ಉಳಿದ ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಬಹುದಾಗಿದೆ.
ಆದ್ದರಿಂದ ರಾಯಪುರದಲ್ಲಿ ನಡೆಯುವ ಕಾಂಗ್ರೆಸ್ ಅಧಿವೇಶನದ ಪಕ್ಷದ ನಾಯಕರ ಪಾಲಿಗೆ ಮಹತ್ವ ಪಡೆದಿದೆ. ಎಐಸಿಸಿ ಮತ್ತು ಪಿಸಿಸಿ ಸಮಿತಿಗಳ ಪುನರುಜ್ಜೀವನಗೊಳಿಸುವ ಈ ಅಧಿವೇಶನದಲ್ಲಿ ದೇಶಾದ್ಯಂತದ ಪ್ರಮುಖ ವರಿಷ್ಠರು, ನಾಯಕರು, ಮುಖಂಡರು ಪಾಲ್ಗೊಳ್ಳುವರು. ಇದರಲ್ಲಿ ಅನೇಕ ವಿಷಯಗಳು ಕೂಡ ಚರ್ಚೆಗೆ ಬರಲಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅದಾನಿ ವಿಚಾರ: ತನಿಖೆ ನಡೆಸುವಂತೆ ಆರ್ಬಿಐ, ಸೆಬಿಗೆ ಕಾಂಗ್ರೆಸ್ ಪತ್ರ