ನವದೆಹಲಿ: ಇದೇ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ನಲ್ಲಿ ನಾಲ್ಕೈದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಪ್ರಮುಖವಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ ಸೇರಿ ಇತರ ಕಡೆ ಎಲೆಕ್ಷನ್ ನಡೆಯಲಿವೆ. ಪ್ರಸ್ತುತ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶದ ಮೇಲೆ ಚಿತ್ತ ಹರಿಸಿದ್ದಾರೆ.
ಕಳೆದ ಎಲೆಕ್ಷನ್ನಲ್ಲಿ ಅತಿಹೆಚ್ಚು ಸ್ಥಾನ ಗೆದ್ದು ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸಿ, ಆ ಬಳಿಕ ಸಿಂದಿಯಾ ಬಂಡಾಯದಿಂದ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಶತಾಯ- ಗತಾಯ ಅಧಿಕಾರ ಹಿಡಿಯಬೇಕು ಎಂದು ಯೋಚಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಜಂಟಿ ರ‍್ಯಾಲಿ ನಡೆಸಲು ಯೋಜಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಬಲ್‌ಪುರದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದ ಒಂದು ದಿನದ ನಂತರ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರ ಜಂಟಿ ರ‍್ಯಾಲಿ ನಡೆಸುವ ಪ್ರಸ್ತಾಪ ಮಾಡಲಾಗಿದೆ.
ಜಬಲ್‌ಪುರದಲ್ಲಿ ಪ್ರಿಯಾಂಕಾ ಗಾಂಧಿ ಅವರ ಸಾರ್ವಜನಿಕ ಸಭೆಯ ಭವ್ಯ ಯಶಸ್ಸು ಕಂಡಿರುವ ಕಾಂಗ್ರೆಸ್, ಜುಲೈನಲ್ಲಿ ಬುಂದೇಲ್‌ಖಂಡ್ ಪ್ರದೇಶದಲ್ಲಿ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಜಂಟಿ ರ‍್ಯಾಲಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ದಿನಾಂಕ ಮತ್ತು ಸ್ಥಳದ ಕುರಿತು ಅಂತಿಮ ಕರೆಯನ್ನು ನಿರ್ಧರಿಸಲಾಗುವುದು ಎಂದೂ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಪ್ರಿಯಾಂಕಾ ಗಾಂಧಿ ಅವರು ಸೋಮವಾರ ಜಬಲ್‌ಪುರದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಮಾದರಿಯಲ್ಲಿ ಐದು ಭರವಸೆಗಳನ್ನು ನೀಡುವುದಾಗಿ ಅವರು ಮಧ್ಯಪ್ರದೇಶದ ಜನರಿಗೂ ಭರವಸೆ ನೀಡಿದರು. ಇದೇ ವೇಳೆ ಬಿಜೆಪಿ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದರು.
2018 ರ ವಿಧಾನಸಭಾ ಚುನಾವಣೆಯಂತೆಯೇ, ಕಮಲ್ ನಾಥ್ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮಾಡುವುದಾಗಿ ಕಾಂಗ್ರೆಸ್ ಮತ್ತೊಮ್ಮೆ ಭರವಸೆ ನೀಡಿದೆ. ಪ್ರಿಯಾಂಕಾ ಗಾಂಧಿ ಸೋಮವಾರ ಮಹಿಳೆಯರಿಗೆ ಮಾಸಿಕ 1,500 ರೂಪಾಯಿಗಳ ಆರ್ಥಿಕ ಯೋಜನೆ, 500 ರೂಪಾಯಿಗಳ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಲಿಂಡರ್, ಜೊತೆಗೆ ಅಗ್ಗದ ವಿದ್ಯುತ್ ನೀಡುವುದಾಗಿ ಮಧ್ಯಪ್ರದೇಶ ಜನರಿಗೆ ವಾಗ್ದಾನ ಮಾಡಿದ್ದಾರೆ. ಈ ಮೂಲಕ ಮಧ್ಯ ಪ್ರದೇಶದಲ್ಲೂ ಕರ್ನಾಟಕದಲ್ಲಿ ಮಾಡಿದಂತೆ ಕಮಾಲ್ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಭರ್ಜರಿ ಟಾಂಗ್: ಈ ನಡುವೆ ಕಾಂಗ್ರೆಸ್ ತಂತ್ರಗಳಿಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭರ್ಜರಿ ತಿರುಗೇಟನ್ನೇ ನೀಡಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 'ಲಾಡ್ಲಿ ಬೆಹ್ನಾ ಯೋಜನೆ'ಯನ್ನು ಈಗಾಗಲೇ ರಾಜ್ಯದಲ್ಲಿ ಹಾರಿಗೆ ತಂದಿದ್ದಾರೆ. ಅಷ್ಟೇ ಅಲ್ಲ 1 ಕೋಟಿ 25 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 1 ಸಾವಿರ ರೂ ಜಮಾ ಮಾಡವ ಮೂಲಕ ಫ್ರೀ ಸಮರ ಸಾರಿದ್ದಾರೆ.
ಇನ್ನು ಕಾಂಗ್ರೆಸ್ 'ನಾರಿ ಸಮ್ಮಾನ್ ಯೋಜನೆ' ಅಡಿ ಮಹಿಳೆಯರಿಗೆ ಕೆಲವು ಷರತ್ತುಗಳೊಂದಿಗೆ ರೂ 1,500 ನೀಡುವುದಾಗಿ ಘೋಷಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸುವುದಾಗಿಯೂ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದಾರೆ.
ಇದನ್ನು ಓದಿ:ಮುಂದಿನ ವರ್ಷ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚಿಸಲು ಕ್ರಮ: ಸಿಎಂ ಸಿದ್ದರಾಮಯ್ಯ