ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನ ಚುನಾವಣೆಗೆ ಅಖಾಡ ಸಿದ್ಧವಾಗಿದೆ. 24 ವರ್ಷಗಳ ನಂತರ ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷರು ಸಿಗುವುದು ಖಚಿತವಾಗಿದೆ. ಇದರಿಂದ ಎರಡು ಪವರ್ ಸೆಂಟರ್ಗಳು ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಆದರೆ, ಗಾಂಧಿ ಕುಟುಂಬದವರು ಪಕ್ಷದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುತ್ತಾರೆ ಎಂಬುವುದು ಸುಳ್ಳಲ್ಲ.
ಮುಂದಿನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ಗೆ ಈಗಾಗಲೇ ರಾಜ್ಯಸಭಾ ಸಂಸದ ದಿಗ್ವಿಜಯ್ ಸಿಂಗ್ ಮತ್ತು ಲೋಕಸಭಾ ಸಂಸದ ಶಶಿ ತರೂರ್ ಅಧಿಕೃತವಾಗಿ ಧುಮುಕ್ಕಿದ್ದಾರೆ. ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟಿನ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರೇಸ್‌ನಿಂದ ಹಿಂದೆ ಸರಿದ್ದಾರೆ. ಸಿಂಗ್ ಮತ್ತು ತರೂರ್ ಇಬ್ಬರೂ ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ಕೊನೆಯ ದಿನವಾಗಿದ್ದು, ಅಚ್ಚರಿಯ ಅಭ್ಯರ್ಥಿ ಅಥವಾ ಗಾಂಧಿ ಕುಟುಂಬಕ್ಕೆ ನಿಷ್ಠರಾದ ಯಾರಾದರೂ ಅಖಾಡಕ್ಕೆ ಇಳಿಯಲಿದ್ದಾರೆ ಎಂಬುವುದು ಇನ್ನೂ ಖಚಿತವಾಗಿಲ್ಲ.
ನಾಯಕರ ಕೆಲ ಹೇಳಿಕೆಗಳು ಗಮನಾರ್ಹ: ಸದ್ಯಕ್ಕೆ ಸಿಂಗ್ ಮತ್ತು ತರೂರ್ ನಡುವೆ ಸ್ಪರ್ಧೆ ನಡೆಯಲಿದೆ ಎಂಬುವುದು ಸ್ಪಷ್ಟವಾಗುತ್ತಿದ್ದಂತೆ ಹಿರಿಯ ನಾಯಕರ ಕೆಲ ಹೇಳಿಕೆಗಳು ಗಮನಾರ್ಹವಾಗಿವೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಪಕ್ಷದ ಸಂಘಟನೆಯಲ್ಲಿ ತಮ್ಮ ಅಪ್ರತಿಮ ಪ್ರಭಾವ ಮುಂದುವರಿಸುತ್ತಾರೆ. ನೀವು ನೆಹರು - ಗಾಂಧಿ ಕುಟುಂಬವನ್ನು ಕಾಂಗ್ರೆಸ್‌ನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅವರು ಪಕ್ಷಕ್ಕಾಗಿ ಸಾಕಷ್ಟು ಮಾಡಿದ್ದಾರೆ ಮತ್ತು ಅದಕ್ಕಾಗಿ ತಮ್ಮ ಪ್ರಾಣವನ್ನು ಸಹ ತ್ಯಾಗ ಮಾಡಿದ್ದಾರೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ನಾಯಕತ್ವಕ್ಕಾಗಿ ಗಾಂಧಿ ಕುಟುಂಬವನ್ನು ಎದುರು ನೋಡುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೆಪಿ ಅಗರ್ವಾಲ್ ಈಟಿವಿ ಭಾರತ್‌ಗೆ ತಿಳಿಸಿದರು.
ಇದನ್ನೂ ಓದಿ: ಕೋಮುವಾದ, ಹಿಂಸಾಚಾರ ಎಲ್ಲಿಂದ ಬಂದರೂ ಒಂದೇ ಆಗಿರುತ್ತದೆ: ಪಿಎಫ್ಐ ಮೇಲೆ ಎನ್ಐಎ ದಾಳಿ ಕುರಿತು ರಾಹುಲ್ ಸ್ಪಷ್ಟ ನುಡಿ
ಇಂದಿಗೂ 99.99 ಪ್ರತಿಶತದಷ್ಟು ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾಗಬೇಕೆಂದು ಬಯಸುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾರೇ ಆಯ್ಕೆಯಾಗುತ್ತಾರೋ ಅವರೇ ಮುಂದಿನ ಪಕ್ಷದ ಮುಖ್ಯಸ್ಥರಾಗುತ್ತಾರೆ ಎಂದು ಹೇಳಿದರು. ಅಲ್ಲದೇ, ಪಕ್ಷಕ್ಕೆ ಸೋನಿಯಾ ಅವರ ಕೊಡುಗೆ ಅಪಾರವಾಗಿದೆ. ಅವರು ಕೇವಲ ಮುಂದೆ ನಿಂತು ಪಕ್ಷವನ್ನು ಮುನ್ನಡೆಸಲಿಲ್ಲ. 2004ರಲ್ಲಿ ಮತ್ತು 2009ರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. ಆ ಸಮಯದಲ್ಲಿ ನಾವು ಸುಮಾರು 15 ರಾಜ್ಯಗಳಲ್ಲಿ ಸರ್ಕಾರಗಳನ್ನೂ ರಚನೆ ಮಾಡಿದ್ದೇವು ಎಂದು ಜೆಪಿ ಅಗರ್ವಾಲ್ ನೆನಪಿಸಿದರು.
2014 ರಲ್ಲಿ ಪಕ್ಷವು ಅಧಿಕಾರ ಕಳೆದುಕೊಂಡ ನಂತರವೂ ಸೋನಿಯಾ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದರು. 2014ರ ನಂತರ ಪಕ್ಷವನ್ನು ಮುನ್ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ, ಪಕ್ಷವನ್ನು ಒಗ್ಗಟ್ಟಾಗಿರುವಲ್ಲಿ ಅವರು ಯಶಸ್ವಿಯಾಗಿ ನಿಭಾಯಿಸಿದರು. ಬಿಜೆಪಿ ವಿರುದ್ಧ ಪಕ್ಷದ ಹೋರಾಟಗಳನ್ನು ಮುನ್ನಡೆಸಿದರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬಂಡೆಯಂತೆ ನಿಂತಿದ್ದಾರೆ. ಈಗ ರಾಹುಲ್ ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುವ ಮೂಲಕ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಅಗರ್ವಾಲ್ ಹೇಳಿದರು.
ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ: ಕಾಂಗ್ರಸ್ ಪಕ್ಷದಲ್ಲಿ ಗಾಂಧಿ ಕುಟುಂಬದವರು ಪ್ರಭಾವ ಹೊಂದಿದ್ದರೂ ಪಕ್ಷದ ಹೊಸ ಅಧ್ಯಕ್ಷರಿಗೆ ಸೂಕ್ತ ಗೌರವವನ್ನು ನೀಡುತ್ತಾರೆ ಮತ್ತು ಸ್ವತಂತ್ರವಾಗಿ' ಕೆಲಸ ಮಾಡಲು ಬಿಡುತ್ತಾರೆ. ಹೊಸ ಅಧ್ಯಕ್ಷರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ ಎಂಬ ವಿಶ್ವಾಸವನ್ನೂ ಹಿರಿಯ ಪ್ರಧಾನ ಕಾರ್ಯದರ್ಶಿ ಅಗರ್ವಾಲ್ ವ್ಯಕ್ತಪಡಿಸಿದರು.
1997ರಲ್ಲಿ ರಾಜೇಶ್ ಪೈಲಟ್ ಮತ್ತು ಶರದ್ ಪವಾರ್ ವಿರುದ್ಧ ಸೀತಾರಾಮ್ ಕೇಸರಿ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದಾಗ ಕೊನೆಯ ಬಾರಿಗೆ ಗಾಂಧಿಯೇತರರು ಪಕ್ಷದ ಮುಖ್ಯಸ್ಥರಾಗಿದ್ದರು. ಆದಾಗ್ಯೂ, ಕೇಸರಿ ಅವರ ನಾಯಕತ್ವದ ನಂತರ ಪಕ್ಷದೊಳಗೆ ಬಣ ಜಗಳಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್, ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವು ನಾಯಕರು ಸಕ್ರಿಯ ರಾಜಕಾರಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದ ಸೋನಿಯಾ ಗಾಂಧಿ ಅವರನ್ನು ಪಕ್ಷದ ಸಾರಥ್ಯ ವಹಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ಹೈಕಮಾಂಡ್ ಹೇಳಿದರೆ ಖರ್ಗೆ ಸ್ಪರ್ಧಿಸಲು ಹಿಂಜರಿಯುವುದಿಲ್ಲ.. ವರದಿ
ಸೋನಿಯಾ 1998ರಲ್ಲಿ ಪಕ್ಷದ ಮುಖ್ಯಸ್ಥರಾದರು ಮತ್ತು 2000ರಲ್ಲಿ ಪಕ್ಷ ಚುನಾವಣೆಯಲ್ಲಿ ಜಿತೇಂದ್ರ ಪ್ರಸಾದ ವಿರುದ್ಧ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಅವರು ಪಕ್ಷವನ್ನು ಮರುಸಂಘಟಿಸಲು ಶ್ರಮಿಸಿದರು. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ)ಅನ್ನು ಅಧಿಕಾರಕ್ಕೂ ತಂದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೋಲಿಸಿದ ಸೋನಿಯಾ ಅವರು, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ತಮ್ಮ ತಮ್ಮನ್ನು 'ವಿದೇಶಿ' ಎನ್ನುತ್ತಿದ್ದ ಬಿಜೆಪಿಯ ಬಾಯಿ ಮುಚ್ಚಿಸಿದರು.
ನಂತರ ಸೋನಿಯಾ ಹಾಗೂ ಮನಮೋಹನ್ ನಾಯಕತ್ವದಲ್ಲಿ 2009ರಲ್ಲೂ ಯುಪಿಎ ಸತತ ಎರಡನೇ ಬಾರಿಗೆ ಗೆಲುವು ಕಂಡಿತು. ಆದರೆ, 2014ರಲ್ಲಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಿಂದ ಕಾಂಗ್ರೆಸ್ ತನ್ನ ವರ್ಚಸ್ಸನ್ನೇ ಕಳೆದುಕೊಂಡಿದೆ. 2017ರಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಮಗ ರಾಹುಲ್ ಗಾಂಧಿಗೆ ಅಧಿಕಾರ ಹಸ್ತಾಂತರಿಸಿದರು. ಆದರೆ, ರಾಹುಲ್ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಅಂದಿನಿಂದ ರಾಹುಲ್ ಗಾಂಧಿಯೇತರರು ಪಕ್ಷವನ್ನು ಮುನ್ನಡೆಸುವ ಸಮಯ ಬಂದಿದೆ ಎಂದು ಪಕ್ಷದ ಅಧ್ಯಕ್ಷರಾಗಲು ನಿರಾಕರಿಸುತ್ತಲೇ ಬಂದಿದ್ದಾರೆ.
ಗಾಂಧಿಗಳು ಕಾಂಗ್ರೆಸ್‌ನ ಸೈದ್ಧಾಂತಿಕ ದಿಕ್ಸೂಚಿ: ಈ ಬಗ್ಗೆ ಮಾತನಾಡಿರುವ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಶಕೀಲ್ ಅಹ್ಮದ್, ಗಾಂಧಿಗಳು ಕಾಂಗ್ರೆಸ್‌ನ ಸೈದ್ಧಾಂತಿಕ ದಿಕ್ಸೂಚಿಯಾಗಿದ್ದು, ಹಳೆಯ ಪಕ್ಷದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ.
ರಾಹುಲ್ ಗಾಂಧಿಯವರು ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ಪಕ್ಷದ ಉನ್ನತ ಹುದ್ದೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಆ ನಿರ್ಧಾರವನ್ನು ನಾವೆಲ್ಲರೂ ಗೌರವಿಸಬೇಕು. ಪಕ್ಷವು ಗಾಂಧಿಯೇತರ ಅಧ್ಯಕ್ಷರನ್ನು ಪಡೆಯಲು ಸಿದ್ಧವಾಗಿದೆ. ಆದರೆ, ಗಾಂಧಿಗಳು ಕಾಂಗ್ರೆಸ್‌ನ ಸೈದ್ಧಾಂತಿಕ ದಿಕ್ಸೂಚಿಯಾಗಿ ಮುಂದುವರಿಯುತ್ತಾರೆ ಎಂದು ಈಟಿವಿ ಭಾರತ್‌ಗೆ ತಿಳಿಸಿದರು.
ಇದನ್ನೂ ಓದಿ: ಸೋನಿಯಾ ಕಠಿಣ ನಿಲುವಿನಿಂದ ತಣ್ಣಗಾದ ಬಂಡಾಯ: ಗೆಹ್ಲೋಟ್ಗೆ ಹಿನ್ನಡೆ
ಹೊಸ ಪಕ್ಷದ ಮುಖ್ಯಸ್ಥರು ಪಕ್ಷದ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಾರೆ. ಆದರೆ, ನೀತಿ ನಿರ್ಧಾರ ವಿಷಯಗಳ ಬಗ್ಗೆ ಗಾಂಧಿ ಕುಟುಂಬದಿಂದ ಮಾರ್ಗದರ್ಶನ ಪಡೆಯಬೇಕು. ಗಾಂಧಿಗಳಿಗೆ ದೇಶದ ಸಮಸ್ಯೆಗಳ ಬಗ್ಗೆ ವಿಶಾಲ ದೃಷ್ಟಿಕೋನವಿದೆ. ಯುಪಿಎ ಅವಧಿಯಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರವನ್ನು ನಡೆಸುತ್ತಿದ್ದಾಗ ಆರ್‌ಟಿಐ ಕಾಯ್ದೆ, ನರೇಗಾ, ಆಹಾರ ಭದ್ರತಾ ಕಾಯ್ದೆಯಂತಹ ಹೆಗ್ಗುರುತು ಶಾಸನಗಳನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿಯವರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ವಿನ್ಯಾಸಗೊಳಸಲಾಗಿತ್ತು ಎಂದು ಶಕೀಲ್ ಅಹ್ಮದ್ ತಿಳಿಸಿದರು.
ಜೊತೆಗೆ ಸೋನಿಯಾ ಗಾಂಧಿ ಅಂದಿನ ಆಡಳಿತಾರೂಢ ಎನ್‌ಡಿಎ ವಿರುದ್ಧ ಜನರನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದ ರೀತಿ ಪಕ್ಷದ ನಾಯಕರಿಗೆ ಇನ್ನೂ ಮಾರ್ಗದರ್ಶಿ ಪುಸ್ತಕವಾಗಿದೆ. ಈಗಿನಂತೆ ನಾವು ವಾಜಪೇಯಿ ಸರ್ಕಾರದಲ್ಲಿ ವಿರೋಧ ಪಕ್ಷದಲ್ಲಿದ್ದೆವು ಮತ್ತು ಹೋರಾಡುತ್ತಿದ್ದೇವೆ. ಆಗ ಸೋನಿಯಾ ನಮ್ಮ ನೇತೃತ್ವ ವಹಿಸಿ ಕಾಂಗ್ರೆಸ್ ಅಧಿಕಾರಕ್ಕೆ ತಂದರು. ರಾಹುಲ್ ಈಗ ರಾಷ್ಟ್ರವ್ಯಾಪಿ ಯಾತ್ರೆಯನ್ನು ಮುನ್ನಡೆಸುತ್ತಿದ್ದು, 2024ರಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ರೇಸ್‌ನಿಂದ ಗೆಹ್ಲೋಟ್ ಔಟ್: ಶಶಿ ತರೂರ್ - ದಿಗ್ವಿಜಯ್ ಸಿಂಗ್ ಮಧ್ಯೆ ಫೈಟ್