ಕನ್ಯಾಕುಮಾರಿ: ಬುಧವಾರ (ಸೆ.7) ಇಲ್ಲಿ ನಡೆಯಲಿರುವ ಮೆಗಾ ರ್‍ಯಾಲಿಯಲ್ಲಿ ಕಾಂಗ್ರೆಸ್ ತನ್ನ ಬಹು ನಿರೀಕ್ಷಿತ 3,570 ಕಿಲೋಮೀಟರ್ ಭಾರತ ಜೋಡೊ ಯಾತ್ರೆಗೆ ಚಾಲನೆ ನೀಡಲಿದೆ. ಆರ್ಥಿಕ ಅಸಮಾನತೆ, ಸಾಮಾಜಿಕ ಧೃವೀಕರಣ ಮತ್ತು ರಾಜಕೀಯ ಕೇಂದ್ರೀಕರಣ ಮುಂತಾದ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಯಾತ್ರೆ ಮಾಡಲಾಗುತ್ತಿದೆ.
ಭಾರತ ಜೋಡೊ ಯಾತ್ರೆಯ ಆರಂಭಕ್ಕೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶ್ರೀಪೆರಂಬದೂರಿನ ರಾಜೀವ್ ಗಾಂಧಿ ಮೆಮೋರಿಯಲ್ ಸ್ಥಳದಲ್ಲಿ ಬುಧವಾರ ನಡೆಯಲಿರುವ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಕನ್ಯಾಕುಮಾರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ ಬಘೇಲ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಖಾದಿಯಿಂದ ತಯಾರಿಸಲಾದ ರಾಷ್ಟ್ರಧ್ವಜವನ್ನು ನೀಡಲಾಗುವುದು. ಮಹಾತ್ಮ ಗಾಂಧಿ ಮಂಡಪಮ್ನಲ್ಲಿ ನಡೆಯುವ ಈ ಸಭೆಯ ನಂತರ ರಾಹುಲ್ ಗಾಂಧಿ ಇತರ ನಾಯಕರೊಂದಿಗೆ ರ‍್ಯಾಲಿ ಆರಂಭವಾಗುವ ಸ್ಥಳಕ್ಕೆ ನಡೆದು ಸಾಗಲಿದ್ದಾರೆ.
ಯಾತ್ರೆಯ ಕುರಿತಂತೆ ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಜನತೆ ತಮಗೆ ಎಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿಂದ ಯಾತ್ರೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ. ದೇಶದಲ್ಲಿ ನಕಾರಾತ್ಮಕ ರಾಜಕೀಯ ನಡೆಯುತ್ತಿದ್ದು, ಜನರ ನಿಜವಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಈ ಯಾತ್ರೆ ಅಗತ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಐದು ತಿಂಗಳ ಸುದೀರ್ಘ ರ‍್ಯಾಲಿ: ಸುಮಾರು ಐದು ತಿಂಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಕನ್ಯಾಕುಮಾರಿಯಿಂದ ಶ್ರೀನಗರದವರೆಗಿನ 3,570 ಕಿಮೀ ಯಾತ್ರೆಯು ಔಪಚಾರಿಕವಾಗಿ ರ್ಯಾಲಿಯಲ್ಲಿ ಪ್ರಾರಂಭವಾದರೂ, ಇದು ವಾಸ್ತವವಾಗಿ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 7 ಗಂಟೆಗೆ ರಾಹುಲ್ ಗಾಂಧಿ ಮತ್ತು ಹಲವಾರು ಇತರ ಕಾಂಗ್ರೆಸ್ ನಾಯಕರು ಮೆರವಣಿಗೆಯಲ್ಲಿ ಹೊರಡುವಾಗ ಪ್ರಾರಂಭವಾಗುತ್ತದೆ.
ಎರಡು ಬ್ಯಾಚ್‌ಗಳಲ್ಲಿ ಯಾತ್ರೆ: 'ಪಾದಯಾತ್ರೆ' ಎರಡು ಬ್ಯಾಚ್‌ಗಳಲ್ಲಿ ಚಲಿಸಲಿದೆ. ಒಂದು ಬ್ಯಾಚ್ ಬೆಳಗ್ಗೆ 7-10:30 ಮತ್ತು ಇನ್ನೊಂದು ಮಧ್ಯಾಹ್ನ 3:30 ರಿಂದ ಸಂಜೆ 6:30 ರವರೆಗೆ. ಬೆಳಗಿನ ಯಾತ್ರೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆ ಇದ್ದರೆ, ಸಂಜೆಯ ಯಾತ್ರೆಯು ಸಾಮೂಹಿಕ ಜನಾಂದೋಲನವಾಗಿರಲಿದೆ. ಪಾದಯಾತ್ರಿಗಳು ಪ್ರತಿನಿತ್ಯ ಸರಾಸರಿ 22-23 ಕಿಮೀ ಕ್ರಮಿಸಲಿದ್ದಾರೆ.
ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ತನ್ನ 119 ನಾಯಕರನ್ನು ಕಾಂಗ್ರೆಸ್ ವಿವಿಧ ಶ್ರೇಣಿಗಳಲ್ಲಿ ವರ್ಗೀಕರಣ ಮಾಡಿದೆ. ಕನ್ಯಾಕುಮಾರಿಯಿಂದ ಶ್ರೀನಗರವರೆಗೆ ಸಂಪೂರ್ಣ ಯಾತ್ರೆಯಾದ್ಯಂತ ನಡೆಯಲಿರುವ ರಾಹುಲ್ ಗಾಂಧಿ ಅವರನ್ನು ಭಾರತ ಯಾತ್ರಿ ಎಂದು ಹೆಸರಿಸಲಾಗಿದೆ. ಪಾದಯಾತ್ರೆಯು ಸೆಪ್ಟೆಂಬರ್ 11 ರಂದು ಕೇರಳ ತಲುಪಲಿದೆ ಮತ್ತು ಮುಂದಿನ 18 ದಿನಗಳ ಕಾಲ ರಾಜ್ಯದಲ್ಲಿ ಸಂಚರಿಸಲಿದೆ. ನಂತರ ಸೆಪ್ಟೆಂಬರ್ 30 ರಂದು ಯಾತ್ರೆ ಕರ್ನಾಟಕ ತಲುಪಲಿದೆ. ದಕ್ಷಿಣ ರಾಜ್ಯಗಳಿಗೆ ತೆರಳುವ ಮುನ್ನ ಯಾತ್ರೆಯು ಕರ್ನಾಟಕದಲ್ಲಿ 21 ದಿನಗಳ ಕಾಲ ಸಂಚರಿಸಲಿದೆ.
ಎಲ್ಲೆಲ್ಲಿ ಸಾಗಲಿದೆ ರ‍್ಯಾಲಿ: ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡು ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಲಗಾಂವ್, ಇಂದೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಲ, ಪಠಾಣ್‌ಕೋಟ್, ಜಮ್ಮು ಮೂಲಕ ಉತ್ತರಾಭಿಮುಖವಾಗಿ ಸಾಗಲಿದೆ. ಶ್ರೀನಗರದಲ್ಲಿ ಕೊನೆಗೊಳ್ಳುತ್ತದೆ. ಯಾತ್ರೆಯಲ್ಲಿ ಭಾಗವಹಿಸುವವರ ವರ್ಗೀಕರಣ ಹೀಗಿದೆ: 'ಭಾರತ ಯಾತ್ರಿಗಳು', 'ಅತಿಥಿ ಯಾತ್ರೆಗಳು', 'ಪ್ರದೇಶ ಯಾತ್ರಿಗಳು' ಮತ್ತು 'ಸ್ವಯಂಸೇವಕ ಯಾತ್ರಿಗಳು'.
ಇದನ್ನು ಓದಿ:ಏಳು ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾ ಸಹಿ: ವಿರೋಧಿ ಶಕ್ತಿಗಳನ್ನು ಒಟ್ಟಾಗಿ ಎದುರಿಸುತ್ತೇವೆ ಎಂದ ಪ್ರಧಾನಿ ಮೋದಿ