ಪಾಟ್ನಾ: 'ಭಾರತ್ ಜೋಡೋ ಯಾತ್ರೆ' ಮಾದರಿಯಲ್ಲಿ ಡಿಸೆಂಬರ್ 28 ರಿಂದ ಬಿಹಾರದಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಆರಂಭಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಇಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಕೋಮುವಾದಿ ಅಜೆಂಡಾದ ವಿರುದ್ಧ 1,200 ಕಿಮೀ ಉದ್ದದ ಪಾದಯಾತ್ರೆ ಬಂಕಾ ಜಿಲ್ಲೆಯಿಂದ ಪ್ರಾರಂಭವಾಗಿ ಬೋಧಗಯಾದಲ್ಲಿ ಮುಕ್ತಾಯಗೊಳ್ಳಲಿದೆ. ಇದು ರಾಜ್ಯದ 17 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಆದರೆ ಬಿಹಾರದಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ.
ಚಿಲ್ಲರೆ ಮತ್ತು ಬಾಲಿಶವಾದ ದಿಕ್ಕು ತಪ್ಪಿಸುವ ತಂತ್ರಗಳನ್ನು ಅನುಸರಿಸುತ್ತಿದ್ದ ಬಿಜೆಪಿಯಲ್ಲಿ ಭಾರತ್ ಜೋಡೋ ಯಾತ್ರೆ ಆತಂಕ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಸರಿ ಪಕ್ಷದ ಪ್ರಮುಖರು ರಾಹುಲ್ ಗಾಂಧಿಯವರ ಪಾದಯಾತ್ರೆಯಿಂದ ಆತಂಕಕ್ಕೊಳಗಾಗಿದ್ದಾರೆ ಎಂದು ಜೈರಾಮ್ ರಮೇಶ್ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಕೂಡ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬಿಹಾರದ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಶಾಸಕರು ರಾಜ್ಯಾದ್ಯಂತ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು.
ಪೂರ್ವ-ಪಶ್ಚಿಮ ಎರಡನೇ ಹಂತದ 'ಭಾರತ್ ಜೋಡೋ ಯಾತ್ರೆ'ಯ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಹಾರದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ರಾಹುಲ್ ಗಾಂಧಿ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 'ಭಾರತ್ ಜೋಡೋ ಯಾತ್ರೆ' ಆರಂಭಿಸಿದ್ದಾರೆ. 150 ದಿನಗಳಲ್ಲಿ 12 ರಾಜ್ಯಗಳ ಮೂಲಕ ಸುಮಾರು 3,500 ಕಿಮೀ ಕ್ರಮಿಸಲು ಅವರು ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಹಿಂಗೋಲಿಯಿಂದ ಸಾಗಿದ ಭಾರತ್ ಜೋಡೋ ಯಾತ್ರೆ