ನವದೆಹಲಿ: ಇಂಧನ ಬೆಲೆಗಳನ್ನು ಏರಿಕೆ ಮಾಡುವ ಮೂಲಕ 7 ವರ್ಷದಲ್ಲಿ ಸುಮಾರು 23 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಗಳಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ತೈಲ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳ ಏರಿಕೆ ಬೆಲೆ ಏರಿಕೆ ವಿರುದ್ಧ ಕಿಡಿಕಾರಿದ ಅವರು, ಇದರಿಂದ ಬಂಡವಾಳಶಾಹಿಗಳಿಗೆ ಸಹಾಯವಾಗಿದೆ. ಜೊತೆಗೆ ಗ್ಯಾಸ್, ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯನ್ನು ಜಿಡಿಪಿ ಏರಿಕೆ (ಜಿ-ಗ್ಯಾಸ್, ಡಿ-ಡಿಸೇಲ್ ಮತ್ತು ಪಿ-ಪೆಟ್ರೋಲ್) ಎಂದು ಕರೆದಿದ್ದಾರೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಎಲ್ಪಿಜಿ ಬೆಲೆ 410 ರೂಪಾಯಿ ಹೆಚ್ಚಿಸಿದೆ. ಈಗ ಎಲ್ಪಿಜಿ ಬೆಲೆ 885 ರೂಪಾಯಿಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಶೇಕಡಾ 42ರಷ್ಟು ಹೆಚ್ಚಾಗಿದೆ. ಡೀಸೆಲ್ ಬೆಲೆ ಶೇಕಡಾ 55ರಷ್ಟು ಏರಿಕೆ ಕಂಡಿದೆ ಎಂದು ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿವೆ ಎಂಬ ವಾದವನ್ನು ಕೇಂದ್ರ ನಾಯಕರು ನೀಡುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆಗಳು 2014ರಿಂದ ಇಳಿಕೆಯಾಗಿವೆ. ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್, ಡಿಸೇಲ್, ಎಲ್ಪಿಜಿ ಬೆಲೆಗಳು ಹೆಚ್ಚುತ್ತಲೇ ಇವೆ ಎಂದು ರಾಹುಲ್ ಕಿಡಿಕಾರಿದರು.
1990ರಲ್ಲಿ ಭಾರತ ಯಾವ ಸ್ಥಿತಿಯಲ್ಲಿತ್ತೋ, ಆ ಸ್ಥಿತಿಗೆ ಮರಳಿದೆ. ಇದು ಆರ್ಥಿಕ ದುರಂತ ಎಂದಿರುವ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಎಲ್ಲವನ್ನೂ ಬದಲಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ ಎಲ್ಲಿ ಬದಲಾವಣೆಯಾಗಿದೆ ಎಂದು ಪ್ರಶ್ನಿಸಿದರು.
ನಿಮಗೆ ಜಿಎಸ್ಟಿಯಿಂದ, ಕೃಷಿ ಕಾಯ್ದೆಗಳಿಂದ, ಬೆಲೆ ಏರಿಕೆಯಿಂದ ಏನೂ ಉಪಯೋಗವಾಗುತ್ತಿಲ್ಲ. ದೇಶದ ಯುವಜನತೆ ಈ ಬಗ್ಗೆ ಆಲೋಚಿಸಬೇಕಿದೆ ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.
ಇದನ್ನೂ ಓದಿ: ದೇಶದಲ್ಲಿ ಆರ್ಥಿಕತೆ ಪುನಃ ಚೇತರಿಕೆ: GST ಸಂಗ್ರಹದಲ್ಲಿ ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚಳ