ಕೊಟ್ಟಾಯಂ( ಕೇರಳ): ಹಳೆಯ ನಾಯಕರನ್ನು ಉಳಿಸಿಕೊಂಡು ಕೇರಳದಲ್ಲಿ ಪಕ್ಷವು ಸಾಕಷ್ಟು ಯುವಜನರಿಗೂ ಈ ಬಾರಿ ಆದ್ಯತೆ ಮತ್ತು ತರಬೇತಿ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕೊಟ್ಟಾಯಂನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, "ನಾವು ಯುವಕರನ್ನು ಅನುಭವದೊಂದಿಗೆ ಬೆಳೆಸಿದ್ದೇವೆ. ಕಾಂಗ್ರೆಸ್ ಕ್ರಾಂತಿ ಸಹ ಮಾಡಿದೆ. ನಮ್ಮ ಅನುಭವಿ ಜನರನ್ನು ಕಾಪಾಡಿಕೊಂಡಿದ್ದೇವೆ ಮತ್ತು ಸಾಕಷ್ಟು ಯುವಕರಿಗೆ ಈ ಬಾರಿ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಆದ್ಯತೆ ನೀಡಿದೆ. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ನಿಂದ ಚುನಾಯಿತರಾದ ಶಾಸಕರು ವಿಭಿನ್ನ ಮನಸ್ಥಿತಿ, ಶಕ್ತಿ ಹೊಂದಿರುತ್ತಾರೆ‘‘ ಎನ್ನುವ ಮೂಲಕ ಕೇರಳ ಮತದಾರರನ್ನು ಸೆಳೆಯಲು ರಾಹುಲ್ ವಿಶೇಷ ಯತ್ನ ಮಾಡುತ್ತಿದ್ದಾರೆ.
ಏಪ್ರಿಲ್ 6ರಂದು ಪ್ರಾರಂಭವಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ವಯನಾಡ್ ಸಂಸದ ಕೇರಳದಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಸೋಮವಾರ, ವಯನಾಡ್ ಸಂಸದರು ಕೊಚ್ಚಿಯಲ್ಲಿ ರ‍್ಯಾಲಿ ನಡೆಸಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 91 ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. 140 ಸದಸ್ಯರ ಕೇರಳ ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.