ಬೆಂಗಳೂರು: ಕಾಂಗ್ರೆಸ್ ರಾಜ್ಯಸಭಾ ಮೊದಲನೇ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ ಮಾಡಿದರು. ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಯಾಗಿರುವ ಎಂ.ಕೆ.ವಿಶಾಲಾಕ್ಷಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ,ಯು.ಟಿ.ಖಾದರ್, ಜಮೀರ್ ಅಹಮದ್ ಖಾನ್ ಉಪಸ್ಥಿತರಿದ್ದರು.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ನಾಳೆ ನಾಮಪತ್ರ ಸಲ್ಲಿಕೆಗೆ ಕಡೆ ದಿನ. ಈಗಾಗಲೇ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಹಾಗೂ ಜಗ್ಗೇಶ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಜಯರಾಮ್ ರಮೇಶ್ ಅಭ್ಯರ್ಥಿ ಆಗಿದ್ದಾರೆ. ಈ ಮೂವರ ಗೆಲುವು ನಿಶ್ಚಿತವಾಗಿದ್ದು, ನಾಲ್ಕನೇ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸಹ ಕಣಕ್ಕಿಳಿಯುವ ಸಿದ್ಧತೆ ನಡೆಸಿದ್ದಾರೆ. ನಾಲ್ಕನೇ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷ ನಾಮನಿರ್ದೇಶಿತ ಸದಸ್ಯ ವಿನಿಷ ನಿರೋ ಸೇರಿದಂತೆ ಒಟ್ಟು 71 ಸದಸ್ಯರ ಬಲ ಹೊಂದಿದೆ. ಬಿಜೆಪಿ 122 ಹಾಗೂ ಜೆಡಿಎಸ್ 32 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್ ಹೆಚ್ಚುವರಿ ಮತಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಕೋರಲು ನಿರ್ಧರಿಸಿದೆ.
ಈಗಾಗಲೇ ತಮ್ಮ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದ್ದು, ಇದೀಗ ಬಿಜೆಪಿ ಬೆಂಬಲ ಪಡೆಯುವುದು ಅನಿವಾರ್ಯ. ಬಿಜೆಪಿ ಬೆಂಬಲ ನೀಡಲು ಸಮ್ಮತಿಸಿದರೆ ಜೆಡಿಎಸ್ ಗೆಲುವು ಸುಲಭವಾಗಲಿದೆ. ಮೂರನೇ ಅಭ್ಯರ್ಥಿಯನ್ನು ತಾವು ಕಣಕ್ಕಿಳಿಸುವುದಿಲ್ಲ ಎಂದು ಬಿಜೆಪಿ ಈಗಾಗಲೇ ತಿಳಿಸಿದೆ. ಈ ಹಿನ್ನೆಲೆ ಕುಪೇಂದ್ರ ರೆಡ್ಡಿ ತಮ್ಮ ಗೆಲುವಿಗೆ ಬಿಜೆಪಿಯನ್ನು ಆಶ್ರಯಿಸುವುದು ಬಹುತೇಕ ಅನಿವಾರ್ಯವಾಗಿದೆ.
ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಅಭ್ಯರ್ಥಿಯನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಮುಂದೆ ಜೆಡಿಎಸ್ ಬೆಂಬಲ ನೀಡದಿದ್ದರೆ ಅಲ್ಪಸಂಖ್ಯಾತ ವಿರೋಧಿ ಹಾಗೂ ಕೋಮುವಾದಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲು ಅನುಕೂಲವಾಗಲಿದೆ ಎಂಬ ಆಶಯವನ್ನು ಹೊಂದಿದೆ ಎಂಬ ಮಾತು ಕೇಳಿಬರುತ್ತಿದೆ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವುದಕ್ಕಿಂತ ಜೆಡಿಎಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಭಾವನೆಯನ್ನು ತೋರಿಸುವುದು ಕಾಂಗ್ರೆಸ್ ಉದ್ದೇಶ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ : ಕಾಂಗ್ರೆಸ್‌ನಿಂದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಕಣಕ್ಕೆ