ನವದೆಹಲಿ: ಈ ವರ್ಷಾಂತ್ಯದೊಳಗೆ ನಡೆಯುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ, 2024ರ ಲೋಕಸಭೆ ಚುನಾವಣೆಗೆ ಹೋರಾಡಲು ವಿಪಕ್ಷ ಮೈತ್ರಿಕೂಟ ಇಂಡಿಯಾದ ಸೀಟು ಹಂಚಿಕೆ ಪ್ರಕ್ರಿಯೆ ಮಾಡಬೇಕು ಎಂದು ಕಾಂಗ್ರೆಸ್ ಬಯಸಿದೆ. ಈಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಾಗ ಕಾಂಗ್ರೆಸ್ ಈ ಪ್ರಸ್ತಾಪ ಮಾಡಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯ ಇಂಡಿಯಾ ಕೂಟದ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಬೇಕು. ಆದರೆ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶದ ಜೊತೆಗೆ ವರ್ಷದ ಬಳಿಕ ನಡೆಯುವ ಮಿಜೋರಾಂ ಚುನಾವಣೆಯ ಬಳಿಕವೇ ಸೀಟು ಹಂಚಿಕೆ ನಡೆಯಬೇಕು ಎಂಬ ವಿಷಯ ಸಮನ್ವಯ ಸಮಿತಿಯಲ್ಲಿ ಚರ್ಚಿಸಲಾಗಿದೆ.
ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸಾಧನೆ ತೋರಿದರೆ, ಆಗ 2024ರ ಸಂಸತ್ ಚುನಾವಣೆಗೆ ಮಿತ್ರಪಕ್ಷಗಳೊಂದಿಗೆ ಸೀಟಿನ ವಿಚಾರವಾಗಿ ಚೌಕಾಶಿ ನಡೆಸಲು ಪಕ್ಷಕ್ಕೆ ಅನುವಾಗಲಿದೆ. ವಿಧಾನಸಭೆ ಚುನಾವಣೆ ನಂತರ ಈ ಎಲ್ಲಾ ಪ್ರಕ್ರಿಯೆ ನಡೆಸಲು ನಮ್ಮ ನಾಯಕರಿಗೆ ತಿಳಿಸಿದ್ದೇವೆ. ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಯಿತು ಎಂದು ಮಧ್ಯಪ್ರದೇಶದ ಎಐಸಿಸಿ ಕಾರ್ಯದರ್ಶಿ ಸಂಜಯ್ ಕಪೂರ್ ತಿಳಿಸಿದರು.
ಸೀಟು ಹಂಚಿಕೆಯಲ್ಲಿ ಆಪ್ ಚೌಕಾಸಿ: ದೆಹಲಿ ಮತ್ತು ಪಂಜಾಬ್ನಲ್ಲಿ ಆಪ್, ಕಾಂಗ್ರೆಸ್ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ವಿಚಾರ ತೊಡಕಾಗುವ ಸಾಧ್ಯತೆ ಇದೆ. ಎರಡೂ ರಾಜ್ಯಗಳಲ್ಲಿ ಆಪ್ ಅಧಿಕಾರದಲ್ಲಿದೆ. ಹೀಗಾಗಿ ಅಲ್ಲಿನ ರಾಜ್ಯ ಘಟಕಗಳು ಮೈತ್ರಿಗೆ ಮುಂದಾಗುತ್ತಿಲ್ಲ. ಪಂಜಾಬ್‌ನ ಕಾಂಗ್ರೆಸ್ ಘಟಕವೂ ಆಪ್ನೊಂದಿಗೆ ಯಾವುದೇ ಚುನಾವಣಾ ಒಪ್ಪಂದ ಮಾಡಿಕೊಳ್ಳಲು ವಿರೋಧಿಸುತ್ತದೆ. ಆದರೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಂತಿಮ ನಿರ್ಧಾರಕ್ಕೆ ಇದು ಬಿಟ್ಟಿದೆ.
29 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಘಟಕ ಎಸ್‌ಪಿಯಿಂದ ಬೇಡಿಕೆಯನ್ನು ಎದುರಿಸಲಿದೆ. ಬುಂದೇಲ್‌ಖಂಡ್ ಪ್ರದೇಶದಲ್ಲಿನ ಏಳು ವಿಧಾನಸಭಾ ಸ್ಥಾನಗಳಿಗೆ ಎಸ್ಪಿ ಸ್ಪರ್ಧಿಸಲು ಬಯಸಿದೆ. ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾಂಗ್ರೆಸ್ ಶ್ರಮಿಸುತ್ತಿದೆ. ಕಾಂಗ್ರೆಸ್ ನಿರ್ಧಾರದಿಂದಾಗಿ ಅಕ್ಟೋಬರ್ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ನಡೆಯಲು ಉದ್ದೇಶಿಸಿದ್ದ ಇಂಡಿಯಾ ಕೂಟದ ಮೊದಲ ರ್ಯಾಲಿ ಮುಂದೂಡಲು ಕಾರಣ ಎಂದು ಹೇಳಲಾಗಿದೆ.