ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಇವರ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ನ ಮಾಜಿ ಸಚಿವ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ತಮಿಳುನಾಡು, ಪುದುಚೆರಿ, ಗೋವಾದ ಉಸ್ತುವಾರಿ ವಹಿಸಿಕೊಂಡಿರುವ ಗುಂಡೂರಾವ್ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿ ವಕ್ತಾರ ಪ್ರೊ.ಗೌರವ್ ವಲ್ಲಭ್ ಅವರು ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಭ್ರಷ್ಟಾಚಾರದಂಥ ಆರೋಪಗಳನ್ನು ಹೊತ್ತಿರುವ ಯಡಿಯೂರಪ್ಪಗೆ ಸಿಎಂ ಹುದ್ದೆಯಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ ಎಂದಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇಂಥವರು ಸಿಎಂ ಆಗಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಏಜೆನ್ಸಿಗಳಾದ ಸಿಬಿಐ, ಇಡಿ, ಮತ್ತು ಐಟಿ ಅಧಿಕಾರಿಗಳು ಪ್ರಕರಣದ ಸಮಗ್ರ ತನಿಖೆ ನಡೆಸಿ ಸತ್ಯ ಬಹಿರಂಗ ಪಡಿಸುವಂತೆ ನಾವು ಒತ್ತಾಯಿಸುತ್ತೇವೆ. ಆದರೆ, ಆ ಏಜೆನ್ಸಿಗಳು ಬಿಜೆಪಿಯ ಕೈಗೊಂಬೆಯಾಗಬಾರದು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಇದನ್ನೂ ಓದಿ:COVID ನಿಯಮ ಉಲ್ಲಂಘಿಸಿದ ಮೆಟ್ರೋ ಪ್ರಯಾಣಿಕರ ಮೇಲೆ BMRCL ದಂಡ ಪ್ರಯೋಗ
ಸಿಎಂ ಯಡಿಯೂರಪ್ಪನವರ ಬಗೆಗಿನ ಈ ಆರೋಪಗಳು ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಿವೆ ಆದರೂ, ಅವರು ಯಾವುದೇ ಕ್ರಮ ಕೈಗೊಳ್ತಿಲ್ಲ. ಮೌನವಾಗಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.