ತಿರುಮಲ: ವೈಕುಂಠ ಏಕಾದಳಿ ಅಂಗವಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಭಕ್ತರು, ದೇವಸ್ಥಾನದ ಆಡಳಿತ ಸಿಬ್ಬಂದಿ ಹಾಗೂ ಪೊಲೀಸರ ನಡುವೆ ವಾಗ್ವಾದದ ಘಟನೆ ನಡೆದಿದೆ.
ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತಿದ್ದೇವೆ. ಕನಿಷ್ಠ ಮಕ್ಕಳಿಗೆ ಹಾಲು, ಹಿರಿಯರಿಗೆ ಅಲ್ಪ ಆಹಾರವೂ ನೀಡದೆ ಐದಾರು ಗಂಟೆಗಳ ಕಾಲ ಕ್ಯೂನಲ್ಲೇ ನಿಲ್ಲಿಸಿದ್ದಾರೆ ಎಂದು ತಿರುಪತಿ ತಿಮ್ಮಪ್ಪನ ಮಹಾದ್ವಾರದಲ್ಲಿ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಇಒ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಟಿಟಿಡಿ ಭದ್ರತಾ ಸಿಬ್ಬಂದಿ, ಭಕ್ತರ ನಡುವೆ ವಾಗ್ವಾದ ನಡೆಯಿತು. ನೂಕಾಟ ತಳ್ಳಾಟಕ್ಕೂ ಕಾರಣವಾಯಿತು. ಕ್ಯೂನಲ್ಲೇ ಗಂಟೆಗಟ್ಟಲೇ ನಿಂತರೂ ಯಾರೂ ಇತ್ತ ಗಮನ ಹರಿಸಿಲ್ಲ. ಪೊಲೀಸರು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದರು. ಇದರಿಂದ ಎಚ್ಚೆತ್ತ ಅಧಿಕಾರಿ ವರ್ಗ ಭಕ್ತರಿಗೆ ಬೇಗ ದರ್ಶನ ನೀಡುವ ಪ್ರಯತ್ನ ಮಾಡಿದರು.