ಮುಜಫರಪುರ: ಆಧುನಿಕ ವೈದ್ಯರು ಹಾಗೂ ವೈದ್ಯ ಪದ್ಧತಿ ಟೀಕಿಸಿರುವುದಕ್ಕಾಗಿ ಬಾಬಾ ರಾಮದೇವ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕೆಂದು ಕೋರಿ ಇಲ್ಲಿನ ವ್ಯಕ್ತಿಯೊಬ್ಬ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಸ್ಥಳೀಯ ನಿವಾಸಿ ಗ್ಯಾನ್ ಪ್ರಕಾಶ ಎಂಬುವರು ತಮ್ಮ ವಕೀಲ ಸುಧೀರ ಕುಮಾರ ಓಝಾ ಎಂಬುವರ ಮೂಲಕ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ದಾಖಲಿಸಿದ್ದಾರೆ. ಈ ಗ್ಯಾನ್ ಪ್ರಕಾಶ ಎಂಬುವರು ಯಾವ್ಯಾವುದೋ ವಿಷಯಕ್ಕೆ ಪದೇ ಪದೇ ನ್ಯಾಯಾಲಯದ ಕದ ತಟ್ಟುವಲ್ಲಿ ಫೇಮಸ್ ಆಗಿದ್ದು, ಇವರು ಸರಣಿ ಮೊಕದ್ದಮೆದಾರರು ಎಂದು ಗುರುತಿಸಲ್ಪಟ್ಟಿದ್ದಾರೆ. ಹಿರಿಯ ರಾಜಕಾರಣಿಗಳು, ಬಾಲಿವುಡ್ ನಟರು ಅಷ್ಟೇ ಏಕೆ ವಿದೇಶಗಳ ಪ್ರಧಾನಿಗಳ ವಿರುದ್ಧವೂ ಮೊಕದ್ದಮೆ ಹೂಡಿದ ಖ್ಯಾತಿ ಇವರದ್ದಾಗಿದೆ.
ಈಗ ಈ ಗ್ಯಾನ್ ಪ್ರಕಾಶ ಬಾಬಾ ರಾಮದೇವ ವಿರುದ್ಧ ದಾವೆ ಹೂಡಿದ್ದು, ಆಧುನಿಕ ವೈದ್ಯ ಪದ್ಧತಿ ಕುರಿತಾದ ಬಾಬಾ ರಾಮದೇವ ಹೇಳಿಕೆಗಳು ವಂಚನೆಯ ಉದ್ದೇಶದಿಂದ ಕೂಡಿವೆ. ಹೀಗಾಗಿ ಇವರ ವಿರುದ್ಧ ದೇಶದ್ರೋಹದ ಕಾಯ್ದೆಯಡಿ ವಿಚಾರಣೆ ನಡೆಸಬೇಕೆಂದು ಕೋರಿದ್ದಾನೆ. ಜೂನ್ 7 ರಂದು ಅರ್ಜಿ ವಿಚಾರಣೆಗೆ ಬರಲಿದೆ.
ಪತಂಜಲಿ ಸಂಸ್ಥೆಯ ಸಂಸ್ಥಾಪಕರಾದ ಬಾಬಾ ರಾಮದೇವ, ಅಲೋಪಥಿ ಔಷಧ ಪದ್ಧತಿ ಹಾಗೂ ಕೋವಿಡ್ ವ್ಯಾಕ್ಸಿನ್ ಕುರಿತಾಗಿ ಇತ್ತೀಚೆಗೆ ನೀಡಿದ ಹೇಳಿಕೆಗಳು ವೈದ್ಯರ ಸಮೂಹದಲ್ಲಿ ಭಾರಿ ಆಕ್ರೋಶ ಮೂಡಿಸಿವೆ.