ಜೌನ್‌ಪುರ (ಉತ್ತರ ಪ್ರದೇಶ): ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಚಿಂಗ್ ಸೆಂಟರ್ನಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಜಯ್ ಕುಶ್ವಾಹ್ ಕೊಲೆಯಾದ ಕೋಚಿಂಗ್ ಸೆಂಟರ್ ಮಾಲೀಕ. ಭಾನುವಾರ ಕೋಚಿಂಗ್ ಸೆಂಟರ್ನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳು ಅಜಯ್ ಅವರ ಎದೆಗೆ ಗುಂಡಿಕ್ಕಿದ್ದಾರೆ. ಇದರಿಂದ ರಕ್ತದ ಮಡುವಿನಲ್ಲಿ ಬಿದ್ದು ಅವರು ಸಾವಿಗೀಡಾಗಿದ್ದಾರೆ. ಇದನ್ನು ಕಂಡವರು ಮಾಹಿತಿ ನೀಡಿದ್ದರಿಂದ ಸ್ಥಳದಲ್ಲಿ ಜನರು ಜಮಾಯಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸುತ್ತಿದ್ದಾರೆ.
ಕೋಚಿಂಗ್ ಸೆಂಟರ್ನಲ್ಲಿ ನಿದ್ದೆ: ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಅಜಯ್ ಕುಶ್ವಾಹ್ ಅವರು ಪ್ರತಿದಿನ ತಮ್ಮ ಕೋಚಿಂಗ್ ಸೆಂಟರ್ನಲ್ಲೇ ಮಲಗುತ್ತಿದ್ದರು. ಸೆಂಟರ್ನ ಕಾರ್ಯಚಟುವಟಿಕೆಗಳು ಬೆಳಗ್ಗೆ 4 ಗಂಟೆಯಿಂದಲೇ ಆರಂಭವಾಗುತ್ತಿದ್ದವು. ಶನಿವಾರ ಸಹ ಅವರು ಕೇಂದ್ರದಲ್ಲಿ ಮಲಗಿದ್ದಾಗ ರಾತ್ರಿ 2 ರಿಂದ 3 ಗಂಟೆಯ ಸುಮಾರಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇದರ ಬೆನ್ನಲ್ಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್ಪಿ ಡಾ. ಅಜಯ್ ಪಾಲ್ ಶರ್ಮಾ, ಜಾಫ್ರಾಬಾದ್ ನಗರಸಭೆ ಅಧ್ಯಕ್ಷ ಕಿಶೋರ್ ಚೌಬೆ ಮತ್ತು ಎಸ್ಒಜಿ ತಂಡ ಸ್ಥಳಕ್ಕೆ ತಲುಪಿತ್ತು. ಘಟನೆಯ ಕುರಿತು ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು 4 ತಂಡಗಳನ್ನು ರಚಿಸಲಾಗಿದೆ.
ಯಾರೊಂದಿಗೂ ದ್ವೇಷವಿಲ್ಲ: ಅಜಯ್ ಅವರ ಎದೆಗೆ ಗುಂಡು ಹಾರಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ತಮ್ಮ ಕುಟುಂಬಕ್ಕೆ ಯಾರೊಂದಿಗೂ ದ್ವೇಷವಿಲ್ಲ. ಅಜಯ್ ಕೂಡ ಯಾರೊಂದಿಗೂ ವೈಮನಸ್ಸು ಹೊಂದಿರಲಿಲ್ಲ. ಸೆಂಟರ್ನಲ್ಲಿ ಅಜಯ್ ಮತ್ತು ಆತನ ಮೂವರು ಸ್ನೇಹಿತರು ಮಲಗುತ್ತಿದ್ದರು. ಆದರೆ, ಶನಿವಾರ ರಾತ್ರಿ ಒಬ್ಬರೇ ಮಲಗಿದ್ದರು. ಈ ವೇಳೆ ದಾಳಿ ನಡೆಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ, ಹಂತಕರನ್ನು ಬಂಧಿಸಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.
ಫೋರೆನ್ಸಿಕ್ ತಂಡದಿಂದ ಸಾಕ್ಷ್ಯ ಸಂಗ್ರಹ: ನಗರಸಭೆ ಅಧ್ಯಕ್ಷ ರಾಮಸುರತ್ ಮೌರ್ಯ ಮಾತನಾಡಿ, ಅಜಯ್ ಸಜ್ಜನ ವ್ಯಕ್ತಿಯಾಗಿದ್ದು, ಯಾರೋ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ. ಅಪರಾಧ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಬೇಡಿಕೆ ಸಲ್ಲಿಸಲಾಗಿದೆ. ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿಧಿವಿಜ್ಞಾನ ತಂಡವೂ ಸಾಕ್ಷ್ಯ ಸಂಗ್ರಹಿಸಿದೆ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್ನಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿತ: 36 ಮಂದಿ ಸಿಲುಕಿರುವ ಶಂಕೆ