ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ, ಮಥುರಾ, ಕುತುಬ್ ಮಿನಾರ್ ವಿವಾದ ಇನ್ನೂ ಜೀವಂತವಾಗಿರುವ ಮಧ್ಯೆಯೇ ಗೋವಾದಲ್ಲಿ ಪೋರ್ಚುಗೀಸರ ದಾಳಿಯಿಂದ ಹಾಳಾದ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪಾಂಚಜನ್ಯ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋವಾದಲ್ಲಿ ಪೋರ್ಚುಗೀಸರಿಂದ ಹಾನಿಗೊಳಗಾದ ದೇವಾಲಯಗಳ ಪುನರ್ನಿರ್ಮಾಣ ಮಾಡಿ, ಪ್ರವಾಸಿಗರ ಆಕರ್ಷಣೆ ಹೆಚ್ಚಿಸಲಾಗುವುದು. ಪ್ರವಾಸಿಗರನ್ನು ದೇವಾಲಯಗಳತ್ತ ಆಕರ್ಷಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಈವರೆಗೆ ಪ್ರವಾಸಿಗರು ಕೇವಲ ಗೋವಾದ ಕಡಲತೀರಗಳಿಂದ ಮಾತ್ರ ಆಕರ್ಷಿತರಾಗಿದ್ದರು. ಆದರೆ, ಈಗ ಇದನ್ನು ದೇವಾಲಯಗಳತ್ತ ಹೊರಳಿಸುವುದು ನಮ್ಮ ಕರ್ತವ್ಯವಾಗಿದೆ. ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಈಗಾಗಲೇ ಅನುದಾನ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಏಕರೂಪ ಸಂಹಿತೆ ಜಾರಿಗೆ ಬೆಂಬಲ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಕೂಗು ಬಲವಾದ ಬೆನ್ನಲ್ಲೇ ಎಲ್ಲಾ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಹೇಳಿಕೆಯನ್ನು ಪುನರುಚ್ಚರಿಸಿದ ಗೋವಾ ಸಿಎಂ, ಗೋವಾ ವಿಮೋಚನೆಯ ನಂತರ ಈ ನೀತಿಯನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತಿದೆ ಎಂದರು.
ಗೋವಾ ವಿಮೋಚನೆಯ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಅನುಸರಿಸಲಾಗುತ್ತಿದೆ. ಇತರ ರಾಜ್ಯಗಳು ಸಹ ಇದನ್ನು ಜಾರಿಗೊಳಿಸಬೇಕು. 60 ವರ್ಷಗಳಿಂದ ಗೋವಾ ಸಾಧಿಸಲಾಗದ್ದನ್ನು ನಾವು 2012 ರಿಂದ 2022 ರ ನಡುವೆ ಸಾಧಿಸಿದ್ದೇವೆ. ಶೀಘ್ರದಲ್ಲೇ ಅತ್ಯುತ್ತಮ ರಾಜ್ಯಗಳಲ್ಲಿ ಗೋವಾ ಒಂದಾಗಲಿದೆ ಎಂದು ಸಾವಂತ್ ಭರವಸೆ ನೀಡಿದರು.