ಹೈದರಾಬಾದ್ : ಮೇಡಕ್ ಜಿಲ್ಲೆಯಲ್ಲಿನ ರೈತರ ಜಮೀನುಗಳನ್ನು ಆರೋಗ್ಯ ಸಚಿವ ಎಟೆಲಾ ರಾಜೆಂದರ್ ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಕೆಸಿಆರ್, ಸಚಿವರ ಬಳಿಯಿದ್ದ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಕಿತ್ತುಕೊಂಡಿದ್ದಾರೆ.
![Etela Rajender](https://etvbharatimages.akamaized.net/etvbharat/prod-images/eetala_0105newsroom_1619859524_622.jpg)
ಸದ್ಯಕ್ಕೆ ಈ ಎಲ್ಲ ಖಾತೆಗಳನ್ನು ಸಿಎಂ ಕೆ. ಚಂದ್ರಶೇಖರ ರಾವ್ ತಮ್ಮ ಬಳಿಯೇ ಇರಿಸಿಕೊಳ್ಳಲಿದ್ದು, ಖಾತೆಗಳ ವರ್ಗಾವಣೆಗೆ ರಾಜ್ಯಪಾಲ ತಮಿಳಸಾಯಿ ಸೌಂದರರಾಜನ್ ಅನುಮತಿ ನೀಡಿದ್ದಾರೆ. ಈ ಕುರಿತು ರಾಜ ಭವನವು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಎಟೆಲಾ ರಾಜೆಂದರ್ ಅವರ ವಿರುದ್ಧದ ಭೂಕಬಳಿಕೆ ಆರೋಪಗಳ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ ಕುಮಾರ ಅವರಿಗೆ ಸಿಎಂ ಆದೇಶ ನೀಡಿದ್ದಾರೆ.
ಜೊತೆಗೆ ಆರೋಪಗಳ ಸತ್ಯಾಸತ್ಯತೆಯ ಕುರಿತು ತನಿಖೆ ನಡೆಸುವಂತೆ ವಿಚಕ್ಷಣಾ ದಳ ಡಿಜಿಪಿ ಪೂರ್ಣಚಂದ್ರ ರಾವ್ ಅವರಿಗೂ ಕೆಸಿಆರ್ ಸೂಚನೆ ನೀಡಿದ್ದಾರೆ.
![letter from Raj Bhavan](https://etvbharatimages.akamaized.net/etvbharat/prod-images/eetela2_0105newsroom_1619859524_676.jpg)
ತಮ್ಮ ಒಡೆತನದ ಸುಮಾರು 100 ಎಕರೆ ಜಮೀನನ್ನು ಆರೋಗ್ಯ ಸಚಿವರು ಹೈನೋದ್ಯಮ ಆರಂಭಿಸಲು ಬಲವಂತವಾಗಿ ಕಬಳಿಸಿದ್ದಾರೆ ಎಂದು ಮೇಡಕ್ ಜಿಲ್ಲೆಯ ಹಲವಾರು ರೈತರು ಇತ್ತೀಚೆಗೆ ಸಿಎಂ ಕೆಸಿಆರ್ ಅವರಿಗೆ ಖುದ್ದಾಗಿ ದೂರು ನೀಡಿದ್ದರು.
ತಮ್ಮ ಜಮೀನುಗಳನ್ನು ಆರೋಗ್ಯ ಸಚಿವ ಹಾಗೂ ಅವರ ಬೆಂಬಲಿಗರು ಒತ್ತಾಯಪೂರ್ವಕವಾಗಿ ಕಬಳಿಸಿದ್ದು, ತಕ್ಷಣ ತಮ್ಮ ಜಮೀನುಗಳನ್ನು ತಮಗೆ ಮರಳಿಸುವಂತೆ ಆಗ್ರಹಿಸಿ ಆಚಂಪೇಟ್ ಹಾಗೂ ಹಕೀಂ ಪೇಟ್ ಗ್ರಾಮದ ಎಂಟು ಜನ ರೈತರು ಕೆಸಿಆರ್ಗೆ ಮನವಿ ಸಲ್ಲಿಸಿದ್ದರು.
ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಎಟೆಲಾ ರಾಜೆಂದರ್ ತಳ್ಳಿ ಹಾಕಿದ್ದು, ಇದೊಂದು ರಾಜಕೀಯ ಕುತಂತ್ರ ಎಂದಿದ್ದಾರೆ. ಅಲ್ಲದೆ ತಾವು ಈ ಆರೋಪಗಳ ಕುರಿತು ನ್ಯಾಯಾಲಯದ ನೇತೃತ್ವದಲ್ಲಿ ಅಥವಾ ಸಿಬಿಐ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.