ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆಗಳ ಬಗ್ಗೆ ಚರ್ಚೆ ಜೋರಾಗಿದೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಲ್ಲಿ ಭಾರಿ ಬದಲಾವಣೆಗೆ ಮುಂದಾಗಿದ್ದು, ಹಾಲಿ ಶಾಸಕರು ಹಾಗೂ ಸಂಸದರಿಗೆ ಟಿಕೆಟ್ ನಿರಾಕರಿಸಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ಜಗನ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಒಟ್ಟು 51 ವಿಧಾನಸಭಾ ಕ್ಷೇತ್ರಗಳಲ್ಲಿ ಉಸ್ತುವಾರಿಗಳನ್ನು ಬದಲಾಯಿಸಲಾಗಿದೆ. ಇದರಲ್ಲಿ ವೈಎಸ್‌ಆರ್ ಕಾಂಗ್ರೆಸ್ ಹಾಲಿ ಶಾಸಕರನ್ನು ಹೊಂದಿರುವ 24 ಕ್ಷೇತ್ರಗಳು ಸಹ ಸೇರಿವೆ. ಇದೇ ರೀತಿಯಾಗಿ ಎಂಟು ಲೋಕಸಭೆ ಕ್ಷೇತ್ರಗಳಲ್ಲೂ ಉಸ್ತುವಾರಿಗಳನ್ನು ಬದಲಾಯಿಸಲಾಗಿದೆ. ಇದರಲ್ಲಿ ಮೂವರು ಸಂಸದರಿಗೆ ಟಿಕೆಟ್ ನೀಡದಿರುವ ತೀರ್ಮಾನಕ್ಕೂ ಪಕ್ಷ ಬಂದಿದೆ.
ಉಸ್ತುವಾರಿ ಬದಲಾವಣೆಯ ಕಸರತ್ತಿನಲ್ಲಿ ಹಲವು ನಾಯಕರಿಗೆ ಟಿಕೆಟ್ ಸಿಗದಿದ್ದರೂ, ಅನಿರೀಕ್ಷಿತವಾಗಿ ಹೊಸಬರಿಗೆ ಅವಕಾಶ ಸಿಕ್ಕಿರುವುದು ಪಕ್ಷದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಇದರಿಂದ ಪಕ್ಷದ ನಾಯಕರಲ್ಲೂ ಅತೃಪ್ತಿ ಸ್ಫೋಟಗೊಂಡಿದೆ. ಕೆಲ ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ಎಂ.ಎಸ್.ಬಾಬು ಮಾತನಾಡಿ, ದಲಿತನಾಗಿ ಹುಟ್ಟಿದ್ದು ನಮ್ಮ ಅಪರಾಧವೇ ಅಥವಾ ಇದು ಪಾಪವೇ?. ನಾನೇನು ತಪ್ಪು ಮಾಡಿದೆ?, ದಲಿತರ ಸ್ಥಾನಗಳನ್ನು ಮಾತ್ರವೇ ಯಾಕೆ ಪಕ್ಷವು ನಕಾರಾತ್ಮಕವಾಗಿ ನೋಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಎಂ.ಎಸ್.ಬಾಬು ಪುತಲಪಟ್ಟು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಡಾ.ಮುತಿರೇವುಳ ಸುನೀಲ್ ಕುಮಾರ್ ಅವರನ್ನು ಪಕ್ಷದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. 2014-19ರ ಸುನೀಲ್ ಸಹ ಇದೇ ಪುತಲಪಟ್ಟು ಕ್ಷೇತ್ರದಿಂದ ವೈಎಸ್‌ಆರ್‌ಸಿಪಿ ಶಾಸಕರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಎಂ.ಎಸ್.ಬಾಬು ಅವರನ್ನು ಕಣಕ್ಕಿಳಿಸಲಾಗಿತ್ತು. ಆಗ ಟಿಕೆಟ್ ಕೈತಪ್ಪಿದ ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸುನೀಲ್ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿದ್ದರು. ಇದು ಸಂಚಲನವನ್ನೂ ಮೂಡಿಸಿತ್ತು. ಇದೀಗ ಐದು ವರ್ಷಗಳ ನಂತರ ಮತ್ತೊಮ್ಮೆ ಕ್ಷೇತ್ರದ ಉಸ್ತುವಾರಿಯನ್ನಾಗಿ ಸುನೀಲ್ ಅವರನ್ನು ಜಗನ್ ಆಯ್ಕೆ ಮಾಡಿದ್ದಾರೆ.
ಅದೇ ರೀತಿಯಾಗಿ ಹಲವು ವಿಧಾನಸಭಾ ಕ್ಷೇತ್ರಗಳು ಮತ್ತು ಲೋಕಸಭೆ ಕ್ಷೇತ್ರಗಳಲ್ಲೂ ಉಸ್ತುವಾರಿಗಳನ್ನು ಬದಲಾಗಿದೆ. ಇದು ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರುವ ಮುನ್ಸೂಚನೆ ಮತ್ತು ಈಗ ಉಸ್ತುವಾರಿಗಳಾಗಿ ನೇಮಕಗೊಂಡವರೇ ಮುಂದೆ ಅಭ್ಯರ್ಥಿಗಳು ಸಹ ಆಗಲಿದ್ದಾರೆ. ಇದರಲ್ಲಿ ಕೆಲ ಸಣ್ಣ-ಪುಟ್ಟ ಬದಲಾವಣೆಗಳು ಸಂಭವಿಸಬಹುದಷ್ಟೇ ಎಂಬ ಚರ್ಚೆ ಜೋರಾಗಿದೆ.
ಸದ್ಯಕ್ಕೆ ಈ ಎಲ್ಲ ಬೆಳವಣಿಗೆಗಳು ಪಕ್ಷದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದರ ನಡುವೆ ವಿಜಯವಾಡ ಟಿಡಿಪಿ ಸಂಸದ ಕೇಶಿನೇನಿ ನಾನಿ ಬುಧವಾರ ಸಂಜೆ ಮುಖ್ಯಮಂತ್ರಿ ಜಗನ್ ಅವರನ್ನು ಭೇಟಿ ಮಾಡಿದ್ದಾರೆ. ಗುರುವಾರ ರಾತ್ರಿ ವೇಳೆಗೆ ಕೇಶಿನೇನಿ ನಾನಿ ಅವರನ್ನು ವಿಜಯವಾಡದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಪಕ್ಷವು ಎಲ್ಲ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವವರೆಗೆ ಇಂತಹ ಕಸರತ್ತು ಮುಂದುವರಿಯುತ್ತಲೇ ಇರುತ್ತದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರದಿಂದ ದೂರವುಳಿಯಲಿದ್ದಾರೆ ಕನುಗೋಲು