ಪುದುಚೇರಿ: ತರಗತಿಯಲ್ಲಿ ತನ್ನ ಮಗನನ್ನು ಹಿಂದಿಕ್ಕಿ ಟಾಪರ್ ಆದ ಎಂಬ ಕಾರಣಕ್ಕಾಗಿ ಮಹಿಳೆಯೋರ್ವಳು 8ನೇ ತರಗತಿ ವಿದ್ಯಾರ್ಥಿಗೆ ವಿಷ ಹಾಕಿ ಕೊಂದಿರುವ ಆಘಾತಕಾರಿ ಘಟನೆ ಪುದುಚೇರಿಯ ಕಾರೈಕ್ಕಲ್ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಹಂತಕಿ ಮಹಿಳೆಯನ್ನು ಬಂಧಿಸಲಾಗಿದೆ. ಕಾರೈಕ್ಕಲ್‌ನ ನೆಹರು ನಗರದ ಖಾಸಗಿ ಶಾಲೆಯಲ್ಲಿ 8ನೇ ತರಗತಿಯ ಬಾಲಮಣಿಕಂದನ್ ಮೃತ ವಿದ್ಯಾರ್ಥಿ. ವಿಕ್ಟೋರಿಯಾ ಸಹಾಯರಾಣಿ ವಿಷ ಕುಡಿಸಿ ಕೊಂದ ಪಾಪಿ ಮಹಿಳೆ.
8ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಮಣಿಕಂದನ್ ಅಗ್ರಸ್ಥಾನ ಪಡೆದಿದ್ದ. ಆತನ ಸಹಪಾಠಿಗಿಂತಲೂ ಅಧಿಕ ಅಂಕಗಳನ್ನು ಗಳಿಸಿದ್ದ. ಇದು ಸಹಪಾಠಿಯ ತಾಯಿಯಲ್ಲಿ ಅಸೂಯೆ ಮೂಡಿಸಿತ್ತು. ತನ್ನ ಮಗನನ್ನು ಮೀರಿಸಿದ ಎಂಬ ಸಿಟ್ಟು ಅವಳಲ್ಲಿ ಮನೆ ಮಾಡಿತ್ತು.
ಇದೇ ಕಾರಣಕ್ಕಾಗಿ ಹಂತಕಿ ವಿಕ್ಟೋರಿಯಾ ಸಹಾಯರಾಣಿ ಶಾಲೆಗೆ ಆಗಮಿಸಿ ಟಾಪರ್ ಮಣಿಕಂದನ್ಗೆ ವಿಷ ಹಾಕಿದ ತಂಪು ಪಾನೀಯ ನೀಡಿ ಕುಡಿಸಿದ್ದಾರೆ. ಮನೆಗೆ ತಲುಪುವಷ್ಟರಲ್ಲಿ ಆ ಬಾಲಕ ನಿರಂತರವಾಗಿ ವಾಂತಿ ಮಾಡಿಕೊಂಡಿದ್ದಾನೆ. ಪೋಷಕರು ಭಯಗೊಂಡು ಕಾರಣ ಕೇಳಿದಾಗ ತನ್ನ ಸಹಪಾಠಿಯ ತಾಯಿ ತಂಪು ಪಾನೀಯ ನೀಡಿದ ಬಳಿಕ ಹೀಗಾಗಿದೆ ಎಂದು ಹೇಳಿದ್ದಾನೆ.
ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕನಿಗೆ ಪಾನೀಯದಲ್ಲಿ ವಿಷ ಬೆರೆಸಲಾಗಿದೆ ಎಂದು ತಿಳಿದುಬಂದಿದೆ.
ಮೃತ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ವಿಕ್ಟೋರಿಯಾ ಸಹಾಯರಾಣಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆಕೆ ತನ್ನ ಮಗನನ್ನು ಹಿಂದಿಕ್ಕಿ ಮಣಿಕಂದನ್ ಟಾಪರ್ ಆಗಿದ್ದಕ್ಕಾಗಿ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವು