ನಾಗ್ಪುರ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬಹುತೇಕ ರೋಗಿಗಳು ಆಮ್ಲಜನಕಕ್ಕಾಗಿ ಹೆಣಗಾಡುತ್ತಿದ್ದಾರೆ. ನಾಗ್ಪುರದ ಇಂದಿರಾ ಗಾಂಧಿ ಮುನ್ಸಿಪಾಲಿಟಿ ಆಸ್ಪತ್ರೆಯಲ್ಲಿ 85 ವರ್ಷದ ಸೋಂಕು ಪೀಡಿತ ವೃದ್ಧನೊಬ್ಬ ಯುವಕನಿಗೆ ಹಾಸಿಗೆ ಬಿಟ್ಟುಕೊಟ್ಟು ತನ್ನ ಜೀವ ತ್ಯಾಗ ಮಾಡಿದ ಮಾನವೀಯ ಘಟನೆ ನಡೆದಿದೆ.
85 ವರ್ಷದ ಕೊರೊನಾ ಪೀಡಿತ ನಾರಾಯಣರಾವ್ ದಾಭಡ್ಕರ್ ಎಂಬುವವರು ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ನಿರ್ಗತಿಕ ವಯಸ್ಕನಿಗೆ ತಾನು ದಾಖಲಾಗಿದ್ದ ಆಕ್ಸಿಜನ್ ಬೆಡ್ ಬಿಟ್ಟುಕೊಟ್ಟ ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ವಿಶಾಲ ಹೃದಯದ ಈ ಅಜ್ಜ ಮನೆಗೆ ತೆರಳಿ ಪ್ರಾಣ ತ್ಯಾಗ ಮಾಡಿ ಕೊರೊನಾ ತಂದೊಡ್ಡಿದ ಬಿಕ್ಕಟ್ಟಿನಲ್ಲಿ ಮಾನವೀಯತೆ ಸಂದೇಶ ಸಾರಿದ್ದಾರೆ.
ಚಾಕೊಲೇಟ್ ಚಿಕ್ಕಪ್ಪ ಎಂದು ಪರಿಚಿತ:
ನಾರಾಯಣರಾವ್ ದಾಭಡ್ಕರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಸ್ವಯಂಸೇವಕನಾಗಿದ್ದವರು. ನಾಗ್ಪುರದಲ್ಲಿ ಚಾಕೊಲೇಟ್ ಚಿಕ್ಕಪ್ಪ ಎಂದು ಚಿರಪರಿಚಿತರು. ಅವರನ್ನು ಭೇಟಿ ಮಾಡಲು ಬಂದವರೆಲ್ಲರಿಗೂ ಚಾಕೊಲೇಟ್ ನೀಡಿ ಕಳುಹಿಸುತ್ತಿದ್ದರು. ಚಾಕೊಲೇಟ್ ಕೊಟ್ಟು ಸಿಹಿ ಹಂಚುತ್ತಿದ್ದ ನಾರಾಯಣರಾವ್, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿ ಯುವಕನಿಗೆ ತಮ್ಮ ಜೀವ ತ್ಯಾಗ ಮಾಡಿ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದ್ದಾರೆ.
![ನಾರಾಯಣರಾವ್ ದಾಭಡ್ಕರ್](https://etvbharatimages.akamaized.net/etvbharat/prod-images/11567915_n-dabhadkar.jpg)
ಆಕ್ಸಿಜನ್ಗಾಗಿ ಪರದಾಟ:
ನಾರಾಯಣರಾವ್ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಸೋಂಕಿನ ನಂತರದ ಆರಂಭಿಕ ದಿನಗಳಲ್ಲಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಯಿತು. ಸಂಬಂಧಿಕರು ಆಮ್ಲಜನಕದ ಹಾಸಿಗೆ ಹುಡುಕಲು ಪ್ರಾರಂಭಿಸಿದರು. ಆದರೆ, ತಕ್ಷಣಕ್ಕೆ ಆಮ್ಲಜನಕ ಸೌಲಭ್ಯದ ಹಾಸಿಗೆ ಲಭ್ಯವಿಲ್ಲದೆ ನಿರಾಶೆಗೊಂಡರು. ಅದೃಷ್ಟವಶಾತ್, ಗಾಂಧಿ ನಗರದ ಇಂದಿರಾ ಗಾಂಧಿ ಪುರಸಭೆ ಆಸ್ಪತ್ರೆಯಲ್ಲಿ ಅವರಿಗೆ ಆಮ್ಲಜನಕ ಹಾಸಿಗೆ ಸಿಕ್ಕಿತು. ಹಾಸಿಗೆಯ ಹಂಚಿಕೆಯ ನಂತರ, ಅಜ್ಜನಿಗೆ ಆಕ್ಸಿಜನ್ ಸಪೋರ್ಟ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವೃದ್ಧನ ನಿರ್ಧಾರಕ್ಕೆ ವೈದ್ಯರು ಅಚ್ಚರಿ:
ಅವರಿಗೆ ಆಕ್ಸಿಜನ್ ಹಾಸಿಗೆ ದೊರೆತ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ತನ್ನ ಗಂಡನನ್ನು ದಾಖಲಿಸಿಕೊಳ್ಳುವಂತೆ ಮಹಿಳೆಯೊಬ್ಬರು ವೈದ್ಯರ ಮುಂದೆ ಮನವಿ ಮಾಡುವುದನ್ನು ನಾರಾಯಣರಾವ್ ಕೇಳಿಸಿಕೊಂಡರು. ಅದನ್ನು ಕೇಳಿದ ಅಜ್ಜ ನಿರಾಸೆಗೊಂಡರು. ಒಂದು ಕ್ಷಣ ಹಿಂಜರಿಕೆಯಿಲ್ಲದೇ 39ರ ಯುವ ರೋಗಿಗೆ ತಮ್ಮ ಆಮ್ಲಜನಕದ ಹಾಸಿಗೆ ನೀಡಲು ನಿರ್ಧರಿಸಿದರು. ಅವರ ನಿರ್ಧಾರದಿಂದ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರು ಕೂಡ ಆಘಾತಕ್ಕೊಳಗಾದರು. ಅಜ್ಜ ತನ್ನ ಆಮ್ಲಜನಕವನ್ನು ತೆಗೆದು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ವೃದ್ಧ ತನ್ನ ಖಚಿತ ನಿರ್ಧಾರದಿಂದ ಹಿಂದೆ ಸರಿಯದೇ ಹಾಸಿಗೆ ಬಿಟ್ಟುಕೊಟ್ಟರು.
![ನಾರಾಯಣರಾವ್ ದಾಭಡ್ಕರ್](https://etvbharatimages.akamaized.net/etvbharat/prod-images/11567915_dabhadkar.jpg)
ವೈದ್ಯರಿಗೆ ಪತ್ರ:
ನಾರಾಯಣರಾವ್ ದಾಭಡ್ಕರ್ ವೈದ್ಯರಿಗೆ ಸ್ವಯಂಪ್ರೇರಿತ ಪತ್ರವೊಂದನ್ನು ಬರೆದರು, "ನಾನು ನನ್ನ ಜೀವನವನ್ನು ಸಂಪೂರ್ಣವಾಗಿ ಬದುಕಿದ್ದೇನೆ. ಹೀಗಾಗಿ ಅಗತ್ಯವಿರುವವರಿಗೆ ನನ್ನ ಆಮ್ಲಜನಕ ಹಾಸಿಗೆ ನೀಡುವಂತೆ ಒತ್ತಾಯಿಸುತ್ತೇನೆ' ಎಂದರು. ಮನೆಗೆ ಹಿಂದಿರುಗುತ್ತಿದಂತೆ ಚಿಕಿತ್ಸೆ ಪಡೆಯುತ್ತಿರುವಾಗ ಪ್ರಾಣ ತ್ಯಾಗ ಮಾಡಿದರು.