ಉಜ್ಜಯಿನಿ (ಮಧ್ಯಪ್ರದೇಶ): ಮಕರ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸಿ ಸಂಭ್ರಮಿಸಲಾಗುತ್ತದೆ. ಆದರೆ ಈ ಸಂಭ್ರಮಕ್ಕೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 20 ವರ್ಷದ ಯುವತಿಯೊಬ್ಬಳು ಬಲಿಯಾಗಿದ್ದಾಳೆ.
ಶನಿವಾರ ಸಂಜೆ ಉಜ್ಜಯಿನಿಯ ಮಾಧವ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಝೀರೋ ಪಾಯಿಂಟ್ ಸೇತುವೆ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯ ಕತ್ತಿಗೆ ಚೀನಾ ನಿರ್ಮಿತ ಗಾಳಿಪಟದ ದಾರ ಸಿಲುಕಿದೆ. ದಾರ ತುಂಡಾಗದೆ ಆಕೆಯ ಗಂಟಲನ್ನು ಸೀಳಿದೆ. ತೀವ್ರ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ. ಚೀನಾ ಗಾಳಿಪಟದ ದಾರಗಳು ಗಾಜಿನ ಪುಡಿ ಲೇಪಿತವಾಗಿದ್ದು, ಜೀವಕ್ಕೆ ಅಪಾಯ ತಂದೊಡ್ಡುವ ಕಾರಣ ಭಾರತದಲ್ಲಿ ಇದರ ಮಾರಾಟ ಕಾನೂನುಬಾಹಿರವಾಗಿದೆ.
ಇದನ್ನೂ ಓದಿ: ಸಂಕ್ರಾಂತಿ ಕಿಚ್ಚು ಹಾಯಿಸುವ ವೇಳೆ ಬೆಂಕಿಗೆ ಬಿದ್ದ ಯುವಕ.. ಮಂಡ್ಯದಲ್ಲಿ ಅವಘಡ
ಮಹಿಳೆಯ ಸಾವಿನ ನಂತರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಚೀನಾ ಗಾಳಿಪಟವನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಗಳಿಗೆ ಸೂಚನೆ ನೀಡಿದ್ದರು. ಅದರಂತೆ ಚೀನಾ ಗಾಳಿಪಟವನ್ನು ಮಾರಾಟ ಮಾಡಲು ಬಳಸುತ್ತಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಅಬ್ದುಲ್ ಜಬ್ಬಾರ್, ರಿತಿಕ್ ಜಾಧವ್ ಮತ್ತು ವಿಜಯ್ ಭಾವಸರ್ ಎಂಬ ಮೂವರು ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.