ನವದೆಹಲಿ: ಮುಂಬರುವ 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ 16 ಸದಸ್ಯರನ್ನೊಳಗೊಂಡ ಪ್ರಣಾಳಿಕೆ ಸಮಿತಿಯನ್ನು ಪ್ರಕಟಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಛತ್ತೀಸ್‌ಗಢದ ಮಾಜಿ ಉಪ ಮುಖ್ಯಮಂತ್ರಿ ಟಿ.ಎಸ್ ಸಿಂಗ್ದೇವ್ ಅವರನ್ನು ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆ ಪ್ರಣಾಳಿಕೆಯನ್ನು ಈ ಸಮಿತಿ ನಿರ್ಧರಿಸಲಿದೆ.
ಈ ಸಮಿತಿಯಲ್ಲಿ ಚಿದಂಬರಂ ಮತ್ತು ಸಿಂಗ್ದೇವ್ ಅವರಲ್ಲದೆ, ಇತರ 14 ನಾಯಕರು ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಇವರಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್ ರಮೇಶ್, ಶಶಿ ತರೂರ್, ಆನಂದ್ ಶರ್ಮಾ, ಗೌರವ್ ಗೊಗೊಯ್, ಗೈಖಂಗಮ್, ಪ್ರವೀಣ್ ಚಕ್ರವರ್ತಿ, ಇಮ್ರಾನ್ ಪ್ರತಾಪ್‌ಗರ್ಹಿ, ಕೆ ರಾಜು, ಓಂಕಾರ್ ಸಿಂಗ್ ಮಾರ್ಕಮ್, ರಂಜಿತ್ ರಂಜನ್, ಜಿಗ್ನೇಶ್ ಮೇವಾನಿ ಮತ್ತು ಗುರುದೀಪ್ ಸಪ್ಪಲ್ ಇದ್ದಾರೆ.
ಲೋಕಸಭಾ ಚುನಾವಣೆ ಕುರಿತು ಕಾಂಗ್ರೆಸ್ ನಡೆಸಿದ ಕಾರ್ಯಕಾರಿ ಸಮಿತಿ (CWC) ಸಭೆಯ ಮರುದಿನ ಅಂದರೆ ನಿನ್ನೆ ಪ್ರಣಾಳಿಕೆ ಸಮಿತಿಯನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂಬರುವ ಲೋಕಸಭಾ ಚುನಾವಣೆಗಾಗಿ ತಕ್ಷಣವೇ ಜಾರಿಗೆ ಬರುವಂತೆ ಪ್ರಣಾಳಿಕೆ ಸಮಿತಿಯನ್ನು ರಚಿಸಿದ್ದಾರೆ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ನಡೆಸಿದ ಈ ಸಭೆಯಲ್ಲಿ ಪಕ್ಷವು ಲೋಕಸಭಾ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿತ್ತು. ಅಲ್ಲದೇ ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದಾಗಿ ಹೇಳಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂತೆಗೆದುಕೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ