ರಾಯಪುರ: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ 5 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದ ನಕ್ಸಲ್‌ನನ್ನು ಎನ್‌ಕೌಂಟರ್‌ನಲ್ಲಿ ಪೊಲೀಸರು ಹೊಡೆದುರುಳಿಸಿದ್ದಾರೆ.
ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ದಾಳಿ ನಡೆಸಿ 22 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಹದಿನೈದು ದಿನಗಳ ನಂತರ ಈ ಎನ್ಕೌಂಟರ್ ನಡೆದಿದೆ. ಬೆಳಗ್ಗೆ 6 ಗಂಟೆಗೆ ನೀಲವಾಯದ ಕಾಡಿನಲ್ಲಿ ರಾಜ್ಯ ಪೊಲೀಸರು, ಮುಂಚೂಣಿ ನಕ್ಸಲ್ ವಿರೋಧಿ ಪಡೆ, ಜಿಲ್ಲಾ ರಿಸರ್ವ್ ಗಾರ್ಡ್ ಸಿಬ್ಬಂದಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ನಕ್ಸಲ್ ಹತ್ಯೆಯಾಗಿದ್ದಾನೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದರು.
ಸಾವನ್ನಪ್ಪಿರುವ ನಕ್ಸಲ್‌ನನ್ನು ಕೋಸಾ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೀಲವಾಯದ ಮಲ್ಲಾಪಾರ ನಿವಾಸಿಯಾಗಿದ್ದ ಈತ ಕಳೆದ 15 ವರ್ಷಗಳಿಂದ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂದು ಪಲ್ಲವ ಹೇಳಿದರು.
9 ಎಂಎಂ ಪಿಸ್ತೂಲ್, ದೇಸಿ ಮದ್ದು ಗುಂಡು, ಮೂರು ಕೆ.ಜಿ ಐಇಡಿ, ಔಷಧಿಗಳು, ದಿನಬಳಕೆಯ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಇದನ್ನೂ ಓದಿ: ನಕ್ಸಲ್ ದಾಳಿಯ ಮಾಸ್ಟರ್ ಮೈಂಡ್ ಈ 'ಹಿದ್ಮಾ'... ಹುಡುಕಿಕೊಟ್ಟವರಿಗೆ 50 ಲಕ್ಷ ರೂ. ಬಹುಮಾನ