ನವದೆಹಲಿ: ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಅವರ ಜನ್ಮದಿನದಂದು ಭಾನುವಾರ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಶಿವಾಜಿ ಮಹಾರಾಜರ ಧೈರ್ಯ ಮತ್ತು ಅವರ ಉತ್ತಮ ಆಡಳಿತವು ನಮಗೆಲ್ಲ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ. 1630 ರಲ್ಲಿ ಜನಿಸಿದ ಶಿವಾಜಿ ತಮ್ಮ ಶೌರ್ಯ, ಹೋರಾಟದ ಕೆಚ್ಚು ಮತ್ತು ಗಟ್ಟಿ ನಾಯಕತ್ವಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.
ನಾನು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಧೈರ್ಯ ಮತ್ತು ಉತ್ತಮ ಆಡಳಿತದ ಮಾದರಿ ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಶಿವಾಜಿ ಮಹಾರಾಜರಿಗೆ ನಮನ ಸಲ್ಲಿಸಿ ಮರಾಠಿಯಲ್ಲಿ ಕೂಡ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ತಾವು ಶಿವಾಜಿ ಮಹಾರಾಜರಿಗೆ ಗೌರವ ಸಲ್ಲಿಸಿದ ಸಂದೇಶಗಳನ್ನು ಮಿಕ್ಸಿಂಗ್ ಮಾಡಲಾದ ಆಡಿಯೋ ಮತ್ತು ವಿಡಿಯೋಗಳನ್ನು ಪ್ರಧಾನಿ ಟ್ಯಾಗ್ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ (1630-80) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶಿವಾಜಿ ಭೋಸ್ಲೆಯವರು ಮರಾಠ ಸಾಮ್ರಾಜ್ಯದ ಉದ್ದಗಲಕ್ಕೂ ಕೋಟೆ ಕೊತ್ತಲಗಳನ್ನು ನಿರ್ಮಿಸಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಕೋಟೆಗಳನ್ನು ಇವರು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತನ್ನ ಸಾಮ್ರಾಜ್ಯವು ಎಲ್ಲಾ ಸಮಯದಲ್ಲೂ ಸುರಕ್ಷತವಾಗಿರುವಂತೆ ಶಿವಾಜಿ ಮಹಾರಾಜರು ಕ್ರಮ ಕೈಗೊಂಡಿದ್ದರು.
ಶಿವಾಜಿ ಜಯಂತಿ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು 1870 ರಲ್ಲಿ ಮೊಟ್ಟ ಮೊದಲಿಗೆ ಆಚರಿಸಲಾಯಿತು. ಮಹಾತ್ಮ ಜ್ಯೋತಿರಾವ್ ಫುಲೆ ಪ್ರಥಮ ಬಾರಿಗೆ ಶಿವಾಜಿ ಜಯಂತಿ ಆಚರಣೆಗೆ ಕರೆ ನೀಡಿದ್ದರು. ಪುಣೆಯಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ರಾಯಗಢದಲ್ಲಿ ಶಿವಾಜಿ ಮಹಾರಾಜರ ಸಮಾಧಿ ಇದೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರಥಮ ಬಾರಿಗೆ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ಶಿವಾಜಿ ತನ್ನ ನವೀನ ಮಿಲಿಟರಿ ತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಭೌಗೋಳಿಕತೆ, ವೇಗ ಮತ್ತು ಆಶ್ಚರ್ಯ ಕಾರ್ಯತಂತ್ರದ ಅಂಶಗಳನ್ನು ನಿಯಂತ್ರಿಸುವ ಸಾಂಪ್ರದಾಯಿಕವಲ್ಲದ ವಿಧಾನಗಳ ಮೂಲಕ ಇವರು ತನಗಿಂತಲೂ ಹೆಚ್ಚು ಶಕ್ತಿಶಾಲಿ ಶತ್ರುಗಳನ್ನು ಸೋಲಿಸಲು ಶಕ್ತರಾಗಿದ್ದರು. ಛತ್ರಪತಿ ಶಿವಾಜಿ ಅವರು ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು.
ಛತ್ರಪತಿ ಶಿವಾಜಿ ಮಹಾರಾಜರು ಹೇಳಿದ ಕೆಲ ನುಡಿಮುತ್ತುಗಳು ಹೀಗಿವೆ: ಆತ್ಮವಿಶ್ವಾಸವು ಶಕ್ತಿಯನ್ನು ನೀಡುತ್ತದೆ ಮತ್ತು ಶಕ್ತಿಯು ಜ್ಞಾನವನ್ನು ನೀಡುತ್ತದೆ. ಜ್ಞಾನವು ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಸ್ಥಿರತೆಯು ವಿಜಯಕ್ಕೆ ಕಾರಣವಾಗುತ್ತದೆ. ಶತ್ರುವನ್ನು ದುರ್ಬಲ ಎಂದು ಭಾವಿಸಬೇಡ, ನಿನ್ನನ್ನು ನೀನು ತುಂಬಾ ಬಲಶಾಲಿ ಎಂದು ಭಾವಿಸಲು ಭಯಪಡಬೇಡ. ಎಲ್ಲರ ಕೈಯಲ್ಲೂ ಖಡ್ಗವಿದ್ದರೂ ಕೊನೆಯಲ್ಲಿ ಇಚ್ಛಾಶಕ್ತಿಯೇ ಸರಕಾರವನ್ನು ಸ್ಥಾಪಿಸುತ್ತದೆ. ಧೈರ್ಯಶಾಲಿ ಮನುಷ್ಯ ಸಹ ವಿದ್ವಾಂಸ ಮತ್ತು ಬುದ್ಧಿವಂತರ ಗೌರವಕ್ಕೆ ತಲೆ ಬಾಗುತ್ತಾನೆ. ಏಕೆಂದರೆ ಧೈರ್ಯವು ಜ್ಞಾನ ಮತ್ತು ಬುದ್ಧಿವಂತಿಕೆಯಿಂದಲೂ ಬರುತ್ತದೆ. ಶಿವಾಜಿ ಮಹಾರಾಜರ ಜಯಂತಿಯು ನಮಗೆ ಅವರ ಧೈರ್ಯ ಮತ್ತು ಸಾಹಸಗಳನ್ನು ನೆನಪಿಸುತ್ತದೆ ಹಾಗೂ ಅದು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ.
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು ಶಿವಾಜಿ ಜಯಂತಿಯ ಆಚರಣೆಗೆ ಹೊಸ ಸ್ವರೂಪ ನೀಡಿದರು. ಅವರು ಶಿವಾಜಿ ಮಹಾರಾಜರ ಕೊಡುಗೆಗಳನ್ನು ಬೆಳಕಿಗೆ ತಂದರು ಮತ್ತು ಶಿವಾಜಿ ಮಹಾರಾಜರ ಉನ್ನತ ವ್ಯಕ್ತಿತ್ವವನ್ನು ಎತ್ತಿ ತೋರಿಸುವ ಮೂಲಕ ಜನರ ಮೇಲೆ ಪ್ರಭಾವ ಬೀರಿದರು.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ವಿಶೇಷ ಪೂಜೆ