ನವದೆಹಲಿ: ಟೀ ಮಾರಾಟಗಾರನೊಬ್ಬ ತಾನು ಐಪಿಎಸ್ ಅಧಿಕಾರಿ ಮತ್ತು ಐಐಟಿ ಪದವೀಧರ ಎಂದು ಸುಮಾರು 50 ಜನರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಗ್ವಾಲಿಯರ್ ನಿವಾಸಿ ವಿಕಾಸ್ ಗೌತಮ್ ಬಂಧಿತ ಆರೋಪಿ.
ಈ ಸಂಬಂಧ ಮಹಿಳೆ ಕಳೆದೆರಡು ದಿನದ ಹಿಂದೆ ಅಂದರೆ ಡಿ. 17ರಂದು ದೂರು ದಾಖಲಿಸಿದ್ದರು. ಆ ಬಳಿಕ ಸೈಬರ್ ಪೊಲೀಸ್ ಠಾಣೆಯ ಎಸಿಪಿ ಅರಣ್ ಕುಮಾರ್ ಚೌದರಿ, ಎಸ್ಎಚ್ಒ ಸಂದೀಪ್ ಪನ್ವಾರ್ ಮತ್ತು ಇನ್ಸ್ಪೆಕ್ಟರ್ ಮುಖೇಶ್ ಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಬಂಧಿಸಿದೆ.
ಪ್ರಕರಣ ಕುರಿತು ಮಾತನಾಡಿರುವ ಡಿಸಿಪಿ ಸಿಂಗ್, ಆರೋಪಿ ಗೌತಮ್ ತಾನು ಐಐಟಿ ಖಾನ್ಪುರ್ನಿಂದ ಪಾಸ್ ಆಗಿರುವುದಾಗಿ ನಂಬಿಸಿದ್ದಾರೆ. ಅಲ್ಲದೇ, ತಾವು 2021ನೇ ಯುಪಿ ಕೇಡರ್ ಐಪಿಎಸ್ ಅಧಿಕಾರಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಈತನ ಆನ್ಲೈನ್ ಪ್ರೊಫೈಲ್ನಲ್ಲಿ ಐಪಿಎಸ್ ವಿಕಾಸ್ ಯಾದವ್ ಎಂದು ಕೂಡ ಬಿಂಬಿಸಿಕೊಂಡಿದ್ದಾರೆ. ಪೊಲೀಸ್ ತನಿಖೆ ವೇಳೆ ಗೌತಮ್ ಗ್ವಾಲಿಯರ್ನಲ್ಲಿ ಐಟಿಐ ಕೋರ್ಸ್ ಮಾಡಿದ್ದ ಎಂದು ಗೊತ್ತಾಗಿದೆ.
ಆತ ದೆಹಲಿಗೆ ಬಂದು ಮುಖರ್ಜಿ ನಗರದಲ್ಲಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ರೆಸ್ಟೋರೆಂಟ್ಗೆ ಬಂದ ಸಿವಿಲ್ ಸರ್ವೀಸ್ಗೆ ತಯಾರಾಗುತ್ತಿದ್ದ ಅಭ್ಯರ್ಥಿಗಳನ್ನು ಗಮನಿಸಿ, ಮೋಸ ಮಾಡಲು ಯೋಜನೆ ರೂಪಿಸಿದ್ದ. ಹೀಗೆ ಸುಮಾರು 50 ಜನರಿಗೆ 14 ಲಕ್ಷ ರೂ ವಂಚಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಮಂಜು; ರೈಲು ಸಂಚಾರ ವಿಳಂಬ, ಟ್ರಾಫಿಕ್ ಸಮಸ್ಯೆ